ಪಣಜಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಗೋವಾ ಸರ್ಕಾರ ಮುಂದಿನ ಎರಡು ವಾರದಲ್ಲಿ ಎಲ್ಲಾ ತಡ ರಾತ್ರಿಯ ಪಾರ್ಟಿ ಮತ್ತು ರೇವ್ ಪಾರ್ಟಿಗಳನ್ನು ರದ್ಧುಗೊಳಿಸುವ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಗೋವಾ ಕಡಲ ತೀರಗಳಲ್ಲಿ ನಡೆಯುವ ರೇವ್ ಪಾರ್ಟಿಗಳನ್ನು ನಿಷೇಧಿಸುವಂತೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಒತ್ತಾಯಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈಗಾಗಲೇ ಗೋವಾ ಸರ್ಕಾರ ಶೇ. 80 ರಷ್ಟು ಪಾರ್ಟಿಗಳನ್ನು ರದ್ಧುಗೊಳಿಸಿದೆ, ಇನ್ನೆರಡು ವಾರಗಳಲ್ಲಿ ಎಲ್ಲಾ ರೀತಿಯ ಪಾರ್ಟಿಗಳು ಕ್ಲೋಸ್ ಆಗಲಿವೆ, ಈ ಸಂಬಂಧ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಕರಾವಳಿ ತೀರ ಈಗಾಗಲೇ ಡ್ರಗ್ಸ್ ಮಾರಾಟ ಮತ್ತು ಕಳ್ಳಸಾಗಣೆಗೆ ಕುಖ್ಯಾತಿಯಾಗಿದೆ, ಇದನ್ನು ನಿಯಂತ್ರಿಸುವ ಅವಶ್ಯಕತೆಯಿದೆ. ಎಲ್ಲಕ್ಕಿಂತ ಮೊದಲು ರೇವ್ ಪಾರ್ಟಿ ಮತ್ತು ಎಲ್ಲಾ ರೀತಿಯ ನೈಟ್ ಪಾರ್ಟಿಗಳನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ.
ನಮ್ಮ ಸಂಸ್ಕೃತಿಗೆ ವಿರೋಧವಾಗಿರುವ ಈ ಪಾರ್ಟಿ ನಡೆಯುತ್ತಿದ್ದರು ಪೊಲೀಸರು ಕಣ್ಮುಚ್ಚಿ ಕುಳಿತಿದ್ದರು. ಲೇಟ್ ನೈಟ್ ಪಾರ್ಟಿ ನಮ್ಮ ಸಂಸ್ಕೃತಿಯಲ್ಲ, ಅದನ್ನು ನಾವು ಪ್ರೋತ್ಸಾಹಿಸಬಾರದು, ಕೂಡಲೇ ಅವುಗಳನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.