

ನವದೆಹಲಿ: ಚುನಾವಣಾ ಆಯೋಗಕ್ಕೆ ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಐಎಡಿಎಂಕೆ ಮಾಜಿ ಮುಖಂಡ ಹಾಗೂ ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಎರಡೆಲೆ ಚಿಹ್ನೆ ಪಡೆಯಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ದಿನಕರನ್ ಹಾಗೂ ಮಲ್ಲಿಕಾರ್ಜನ್ ಅವರನ್ನು ಇಂದು ವಿಶೇಷ ಕೋರ್ಟ್ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿದ ವಿಶೇಷ ಕೋರ್ಟ್ ನ ನ್ಯಾಯಮೂರ್ತಿ ಪೂನಂ ಚೌದರಿ ಅವರು ದಿನಕರನ್ ಹಾಗೂ ಅವರ ಬೆಂಬಲಿಗ ಮಲ್ಲಿಕಾರ್ಜುನ್ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೊಲೀಸರು ದಿನಕರನ್ ಹಾಗೂ ಮಲ್ಲಿಕಾರ್ಜುನ್ ಅವರ ವಿಚಾರಣೆ ಪ್ರಸ್ತುತ ಅಗತ್ಯವಿಲ್ಲ. ಪ್ರಸ್ತುತ ತಮಗೆ ದೊರೆತಿರುವ ಸಾಕ್ಷ್ಯಾಧಾರಗಳ ಪರಿಶೀಲನೆ ಹಾಗೂ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ ಎಂದು ಹೇಳಿದ್ದರಿಂದ ಇಬ್ಬರೂ ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.