ನವದೆಹಲಿ: ಆಧಾರ್ ನಲ್ಲಿನ ದತ್ತಾಂಶಗಳನ್ನು ಬಳಸಿ ನಾಗರಿಕರ ಚಲನವಲನದ ಮೇಲೆ ನಿಗಾ ಇಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಮಂಗಳವಾರ ಸ್ಪಷ್ಟಪಡಿಸಿದೆ.
ಆಧಾರ್ ಯೋಜನೆ ಮತ್ತು ಖಾಸಗಿತನ ಕುರಿತು ವಿಚಾರಣೆ ನಡೆಸುತ್ತಿರುವ 9 ಸದಸ್ಯರ ಸಾಂವಿಧಾನಿಕ ಪೀಠದ ಮುಂದೆ ವಾದ ಮಂಡಿಸಿದ ಸರ್ಕಾರಿ ವಕೀಲರು, 'ಒಂದು ವೇಳೆ ನ್ಯಾಯಾಲಯವೇ ಸೂಚಿಸಿದರೂ ಸಾರ್ವಜನಿಕರ ಚಲನವಲನಗಳ ಮೇಲೆ ನಿಗಾ ಇಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಖಾಸಗಿ ದತ್ತಾಂಶಗಳು ಬಹಿರಂಗವಾಗದಂತೆ ತಡೆಯಲು ಕಾನೂನು ರೂಪಿಸಲಾಗುತ್ತಿದೆ. ಈ ಸಂಬಂಧ ಸಮಿತಿಯನ್ನೂ ರಚಿಸಲಾಗಿದೆ ಎಂದು ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೇಳಿದೆ.
ಬಳಿಕ ಪ್ರತಿಕ್ರಿಯೆ ನೀಡಿರುವ ನ್ಯಾಯಪೀಠ, ದತ್ತಾಂಶಗಳ ರಕ್ಷಣೆಗೆ ಸರ್ಕಾರ ಗುರಿ ಮೀರಿದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ. ಆಧಾರ್ ಯೋಜನೆ ಕುರಿತಂತೆ ಇಂದು ಸುಪ್ರೀಂಕೋರ್ಟ್ ಅಂತಿಮ ವಿಚಾರಣೆ ನಡೆಸುವ ಸಾಧ್ಯತೆಗಳಿದ್ದು, ತೀರ್ಪು ಕಾಯ್ದಿರಿಸುವ ನಿರೀಕ್ಷೆಗಳಿವೆ ಎಂದು ಹೇಳಲಾಗುತ್ತಿದೆ.