
ಕೋಲ್ಕತಾ: ಭಾರತ ಮತ್ತು ಚೀನಾ ದೇಶಗಳ ನಡುವಿನ ಡೊಕ್ಲಾಂ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ನಡೆಯಬೇಕಿದ್ದ ಚೀನಾದ ಒನ್ ಬೆಲ್ಟ್-ಒನ್ ರೋಡ್ ಯೋಜನೆ ಮಹತ್ವಾಕಾಂಕ್ಷಿ ವಿಚಾರ ಸಂಕಿರಣ ಕಾರ್ಯಕ್ರಮ ರದ್ದುಗೊಂಡಿದೆ.
"ಬಿಆರ್‌ಐ, ಬಿಸಿಐಎಂ ಆ್ಯಂಡ್ ರೋಲ್ ಆಫ್ ಈಸ್ಟರ್ನ್ ಇಂಡಿಯಾ" ಹೆಸರಿನ ವಿಚಾರ ಸಂಕಿರಣ ಇದಾಗಿದ್ದು, ಇದನ್ನು ಚೀನಾ ರಾಯಭಾರ ಕಚೇರಿ ಆಗಸ್ಟ್10ರಂದು ಕೋಲ್ಕತಾದಲ್ಲಿ ಹಮ್ಮಿಕೊಂಡಿತ್ತು. ಚೀನಾದ ಸಿಪೆಕ್ ಕಾರಿಡಾರ್‌ನಿಂದ ಕೋಲ್ಕತಾ ಮೂಲಕ ಬಾಂಗ್ಲಾದೇಶ, ಮ್ಯಾನ್ಮಾರ್‌ಗೆ ಸಂಪರ್ಕ ಕಲ್ಪಿಸುವ ಯೋಜನೆ ಕುರಿತ ವಿಚಾರ ಸಂಕಿರಣ ಇದಾಗಿತ್ತು.
ಆದರೆ ಭಾರತ ಮತ್ತು ಚೀನಾ ದೇಶಗಳ ನಡುವಿನ ಗಡಿ ಬಿಕ್ಕಟ್ಟು ತಾರಕಕ್ಕೇರಿರುವ ಹಿನ್ನಲೆಯಲ್ಲಿ ಈ ಮಹತ್ವಾಕಾಂಕ್ಷಿ ವಿಚಾರ ಸಂಕಿರಣ ದಿಢೀರ್ ರದ್ದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೋಲ್ಕತಾದಲ್ಲಿರುವ ಚೀನಾ ರಾಯಭಾರ ಕಚೇರಿ ಅಧಿಕಾರಿಗಳು "ಅನಿವಾರ್ಯ ಕಾರಣಗಳಿಂದ ವಿಚಾರ ಸಂಕಿರಣ ರದ್ದುಗೊಳಿಸಲಾಗಿದೆ" ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆರ್ಥಿಕ ಅಂತರಸಂಪರ್ಕದ ಉದ್ದೇಶದಿಂದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಚೀನಾ ಬರೊಬ್ಬರಿ 1.3 ಟ್ರಿಲಿಯನ್ ಡಾಲರ್ ಹಣ ಹೂಡಿಕೆ ಮಾಡಿದ್ದು, ಈ ಬೃಹಚ್ ಯೋಜನೆಯಡಿಯಲ್ಲಿ ರಸ್ತೆಗಳು, ವಾಣಿಜ್ಯ ಬಳಕೆಯ ವಿಮಾನ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳು ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸುವುದು ಈ ಯೋಜನೆ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ಚೀನಾ ತನ್ನ ವಾಣಿಜ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿದೆ. ಆದರೆ ಪ್ರಸ್ತುತ ಭಾರತದೊಂದಿಗೆ ಎದುರಾಗಿರುವ ಡೊಕ್ಲಾಂ ಗಡಿ ವಿವಾದ ಇದೀಗ ಚೀನಾದ ಈ ಯೋಜನೆ ಮೇಲೆ ಕರಿನೆರಳು ಬೀರುವಂತೆ ಮಾಡಿದೆ.
Advertisement