

ಚಂಡೀಘಡ: ಪಂಜಾಬ್ ಮತ್ತು ಹರಿಯಾಣದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್-ಹರಿಯಾಣ ಹೈಕೋರ್ಟ್ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮ ರಾಜಕೀಯ ಲಾಭಕ್ಕಾಗಿ ಹಿಂಸಾಚಾರ ನಡೆಯಲು ಬಿಟ್ಟಿದ್ದೀರಾ ಎಂದು ಛೀಮಾರಿ ಹಾಕಿದೆ.
ನಿನ್ನೆ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪಿನ ಬಳಿಕ ಕೋರ್ಟ್ ಆವರಣ ಅಕ್ಷರಶಃ ರಣರಂಗವಾಗಿತ್ತು. ಬಾಬಾ ಅನುಯಾಯಿಗಳು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೋರ್ಟ್ ಆವರಣದಲ್ಲಿದ್ದ ಪತ್ರಕರ್ತರ ವಾಹನಗಳೂ ಸೇರಿದಂತೆ ನೂರಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲದೆ ಘಟನೆಯಲ್ಲಿ 32 ಮಂದಿ ಸಾವನ್ನಪ್ಪಿ, 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
ಘಟನೆ ಸಂಬಂಧ ಇಂದು ಪಂಜಾಬ್ ಹರ್ಯಾಣ ಹೈಕೋರ್ಟ್ ನಲ್ಲಿ ಭದ್ರತಾ ಮೇಲ್ವಿಚಾರಣೆ ನಡೆದಿದ್ದು, ಈ ವೇಳೆ ಉಭಯ ರಾಜ್ಯಗಳ ಸರ್ಕಾರಗಳು ಭದ್ರತೆ ಸಂಬಂಧ ಮತ್ತು ಹಿಂಸಾಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಈ ವೇಳೆ ಹರ್ಯಾಣ ಸರ್ಕಾರವನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು. ಪ್ರಮುಖವಾಗಿ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ಅವರ ಕಾರ್ಯವೈಖರಿಯನ್ನು ರಾಜಕೀಯ ಶರಣಾಗತಿ ಎಂದು ಹೇಳಿ ಛೀಮಾರಿ ಹಾಕಿದೆ.
"ಹಿಂಸಾಚಾರದ ಬಗ್ಗೆ ನಿಮಗೆ ಮೊದಲೇ ಮಾಹಿತಿ ಇರಲಿಲ್ಲವೇ .? ಪಂಚುಕುಲಾ ಕೋರ್ಟ್ ತನಕ 200 ವಾಹನಗಳನ್ನು ಬಿಟ್ಟಿದ್ದೇಕೆ?..ದುಷ್ಕರ್ಮಿಗಳ ಬಗ್ಗೆ ನಿಮಗೆ ಗೊತ್ತಿಲ್ಲವೇ? ರಾಜಕೀಯ ಲಾಭಕ್ಕಾಗಿ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ಸಿಂಗ್ ನನ್ನು ಮುಕ್ತವಾಗಿ ಓಡಾಡಲು ಬಿಟ್ಟಿದ್ದಿರೇ? ಎಂದು ಹೈಕೋರ್ಟ್ ಪ್ರಶ್ನಿಸಿದೆ. ಅಂತೆಯೇ "ರಾಜಕೀಯ ಲಾಭಕ್ಕಾಗಿ ರಾಜ್ಯವನ್ನು ಹೊತ್ತಿ ಉರಿಯಲು ರಾಜ್ಯ ಸರ್ಕಾರ ಬಿಟ್ಟಿದ್ದು. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಉಂಟಾಗಲು ಸಿಎಂ ಖಟ್ಟರ್ ನೇರ ಹೊಣೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು..