

ನವದೆಹಲಿ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದು, ಬಿಜೆಪಿಗೆ ಕಳಂಕ ತರಲು ವಿರೋಧ ಪಕ್ಷಗಳು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತವೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಗುರುವಾರ ಹೇಳಿದ್ದಾರೆ.
ಕೇಂದ್ರದ ಬಜೆಟ್ ಮಂಡನೆ ದಿನಾಂಕವನ್ನು ಬದಲು ಮಾಡುವಂತೆ ವಿರೋಧ ಪಕ್ಷಗಳು ಪಟ್ಟಿಹಿಡಿದಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಜೆಟ್ ದಿನಾಂಕವನ್ನು ವಿರೋಧಪಕ್ಷಗಳು ನಿರ್ಧರಿಸುವಂತಿಲ್ಲ. ಸರ್ಕಾರಕ್ಕೆ ಕಳಂಕ ತರಲು ವಿರೋಧ ಪಕ್ಷಗಳು ಏನನ್ನೂ ಬೇಕಾದರೂ ಹೇಳುತ್ತವೆ. ಆದರೆ, ನಾವು ನಮ್ಮ ನಿರ್ಧಾರವನ್ನು ತೆಗೆದುಕೊಂಡಾಗಿದೆ. ನಿರ್ಧಾರವನ್ನು ಈ ಮೊದಲೇ ಕೈಗೊಳ್ಳಲಾಗಿದ್ದು. ಇದನ್ನು ಮೊದಲೇ ಘೋಷಣೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಬಜೆಟ್ ದಿನಾಂಕ ಸಂಬಂಧ ವಿರೋಧ ಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿ ಮಾಡುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ. ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಬೇಕೆಂದು ನಮ್ಮ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಆದರೆ, ವಿರೋಧ ಪಕ್ಷಗಳು ನೀತಿ ಸಂಹಿತೆಗೆ ವಿರುದ್ಧವಾಗಿ ವಾದ ಮಂಡಿಸುತ್ತಿವೆ. ನೀತಿ ಸಂಹಿತೆಯನ್ನು ಚುನಾವಣೆ ಆಯೋಗವೇ ಸೃಷ್ಟಿ ಮಾಡಿರುವುದರಿಂದ ಯಾವುದೇ ಸಮಸ್ಯೆ ಬಗೆಹರಿಯಬೇಕೆಂದರೆ ಚುನಾವಣಾ ಆಯೋಗದ ಬಳಿಯೇ ಹೋಗಬೇಕು. ಚುನಾವಣಾ ಆಯೋಗವೇ ಎಲ್ಲವನ್ನೂ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಬಜೆಟ್ ದಿನಾಂಕವನ್ನು ಫೆಬ್ರವರಿ 1ಕ್ಕೆ ನಿಗದಿ ಮಾಡಲಾಗಿದ್ದು, ಪಂಚ ರಾಜ್ಯಗಳ ಚುನಾವಣೆ ಫೆಬ್ರವರಿ 4ರಿಂದ ಆರಂಭವಾಗಲಿದೆ. ಚುನಾವಣೆಗೂ ಮುನ್ನ ಬಜೆಟ್ ಘೋಷಣೆ ಮಾಡಿದರೆ ಬಿಜೆಪಿ ಹೊಸ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬಿಜೆಪಿ ಜನರನ್ನು ತನ್ನತ್ತ ಸೆಳೆದುಕೊಂಡು ಬಿಡುತ್ತದೆ ಎಂಬ ಕಾರಣಕ್ಕೆ ವಿರೋಧಗಳು ತನ್ನ ಭೀತಿಯನ್ನು ವ್ಯಕ್ತಪಡಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.