

ಸೋಫಿಯಾನ್: ನ್ಯಾಷನಲ್ ಕಾನ್ಫರೆನ್ಸ್'ನ ಶಾಸಕ ಶೌಕತ್ ಹುಸೇನ್ ಗನಿ ಅವರ ನಿವಾಸದ ಮೇಲೆ ಉಗ್ರರು ದಾಳಿ ನಡೆಸಿರುವ ಘಠನೆ ಗುರುವಾರ ತಡರಾತ್ರಿ ನಡೆದಿದೆ.
ಸೋಫಿಯಾನ್ ಜಿಲ್ಲೆಯಲ್ಲಿರುವ ಶೌಕತ್ ಅವರ ನಿವಾಸದ ಮೇಲೆ ಕಳೆದ ರಾತ್ರಿ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಶೌಕತ್ ಅವರ ನಿವಾಸದ ಬಳಿ ಬಂದಿರುವ ಶಸ್ತ್ರಾಸ್ತ್ರಧಾರಿಗಳು ಇದ್ದಕ್ಕಿದ್ದಂತೆ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಎಚ್ಚೆತ್ತ ಭದ್ರತಾ ಪಡೆಗಳು ಉಗ್ರರಿಗೆ ದಿಟ್ಟ ಉತ್ತರವನ್ನು ನೀಡಿದ್ದಾರೆ. ನಂತರ ಉಗ್ರರು ಸ್ಥಳದಿಂದ ಕಾಲ್ಕಿತ್ತಿದ್ದಾರೆಂದು ಹೇಳಲಾಗುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ ಶಾಸಕ ಶೌಕತ್ ಅವರು ಮನೆಯಲ್ಲಿರಲಿಲ್ಲ ಎನ್ನಲಾಗಿದೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಉಗ್ರ ಬುರ್ಹಾನ್ ವಾನಿಯನ್ನು ಭಾರತೀಯ ಮೇಲೆ ಹತ್ಯೆ ಮಾಡಿತ್ತು. ಪ್ರಕರಣ ಸಂಬಂಧ ಹೇಳಿಕೆ ನೀಡಿದ್ದ ಶೌಕತ್ ಗನಿ ಅವರು, ಬುರ್ಹಾನಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೂ ಕಾಶ್ಮೀರ ಜನತೆ ಗಡಿ ನಿಯಂತ್ರಣ ರೇಖೆ ದಾಟುವುದನ್ನು ಮುಂದುವರೆಸಲಿದ್ದಾರೆಂದು ಹೇಳಿದ್ದರು. ಈ ಹೇಳಿಕೆ ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ಶೌಕತ್ ಅವರ ಹೇಳಿಕೆ ಪಕ್ಷದ್ದೋ ಅಥವಾ ತಮ್ಮ ವೈಯಕ್ತಿಕ ಹೇಳಿಕೆಯೋ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪಿಡಿಪಿ ನಾಯಕರು ಪಟ್ಟು ಹಿಡಿದಿದ್ದರು.