ನವದೆಹಲಿ: ಭಾರತೀಯ ಸೈನಿಕ ತಮ್ಮ ವಶದಲ್ಲಿದ್ದು ಸದ್ಯದಲ್ಲಿಯೇ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿದೆ. ಮೂರು ತಿಂಗಳ ಹಿಂದೆ ಭಾರತದ ಯೋಧ ಪ್ರಮಾದವಶಾತ್ ಗಡಿ ನಿಯಂತ್ರಣ ರೇಖೆ ದಾಟಿದ್ದರು. ಅವರನ್ನು ಪಾಕಿಸ್ತಾನ ಸೇನೆ ಸೆರೆ ಹಿಡಿದಿತ್ತು.
37 ರಾಷ್ಟ್ರೀಯ ರೈಫಲ್ಸ್ ನ ಸಿಪಾಯಿ ಚಂದು ಲಾಲ್ ಚವಾನ್ ಶಸ್ತಾಸ್ತ್ರಗಳೊಂದಿಗೆ ಗೊತ್ತಾಗದೆ ಪ್ರಮಾದದಿಂದ ಕಳೆದ ಸೆಪ್ಟೆಂಬರ್ 30ರಂದು ಗಡಿ ನಿಯಂತ್ರಣ ರೇಖೆ ದಾಟಿ ಹೋಗಿದ್ದರು. ಅದು ಆಗಿದ್ದು ಪಾಕ್ ಪ್ರಾಂತ್ಯದಲ್ಲಿನ ಉಗ್ರರ ಲಾಂಚ್ ಪಾಡ್ ಮೇಲೆ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮಾರನೇ ದಿನ.
ಆ ದಿನದಿಂದ ಇಲ್ಲಿಯವರೆಗೆ ಚಂದು ಲಾಲ್ ಪಾಕ್ ಸೇನೆಯ ಹಿಡಿತದಲ್ಲಿದ್ದಾರೆ. ಇದೀಗ ಅವರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡುವುದಾಗಿ ಪಾಕಿಸ್ತಾನ ಭರವಸೆ ನೀಡಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಡಾ.ಸುಭಾಷ್ ಭಮ್ರೆ ತಿಳಿಸಿದ್ದಾರೆ.
ಭಾರತೀಯ ಯೋಧರೊಬ್ಬರು ತಮ್ಮ ಬಳಿ ಇದ್ದಾರೆ ಎಂಬುದನ್ನು ಪಾಕಿಸ್ತಾನ ಮೊದಲ ಸಲ ಒಪ್ಪಿಕೊಂಡಿದ್ದು, ಅವರು ಪ್ರಮಾದವಶಾತ್ ಗಡಿ ನಿಯಂತ್ರಣ ರೇಖೆ ದಾಟಿ ಹೋಗಿದ್ದಾರೆ ಎಂದು ಹೇಳಿದೆ ಎಂದು ಭಮ್ರೆ ಹೇಳುತ್ತಾರೆ.
ಚಂದು ಲಾಲ್ ನ ಸುರಕ್ಷಿತ ಬಿಡುಗಡೆಗೆ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕ ಪಾಕಿಸ್ತಾನದ ಅಧಿಕಾರಿಯೊಂದಿಗೆ 15ರಿಂದ 20 ಬಾರಿ ಮಾತುಕತೆ ನಡೆಸಿದ್ದಾರೆ. ಕಳೆದ ಮಂಗಳವಾರ ಇಬ್ಬರೂ ಅಧಿಕಾರಿಗಳು ಮಾತುಕತೆ ನಡೆಸಿದ್ದರು ಎಂದು ಭಮ್ರೆ ಹೇಳಿದರು.