

ಹೈದರಾಬಾದ್: ಜಲ್ಲಿಕಟ್ಟು ಸಂಬಂಧ ತಮಿಳುನಾಡಿನಲ್ಲಿ ನಡೆಸಲಾಗುತ್ತಿರುವ ವ್ಯಾಪಕ ಪ್ರತಿಭಟನೆ ಕುರಿತಂತೆ ಹೇಳಿಕೆ ನೀಡಿರುವ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ "ಜಲ್ಲಿಕಟ್ಟು ಪ್ರತಿಭಟನೆ ಹಿಂದೂ ಪರ ಸಂಘಟನೆಗಳಿಗೆ ತಕ್ಕ ಪಾಠವಾಗಿದ್ದು, ಏಕರೂಪ ನಾಗರೀಕ ಸಂಹಿತೆ ಹೇರಿಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಒವೈಸಿ, ಹಿಂದೂಪರ ಸಂಘಟನೆಗಳಿಗೆ ಜಲ್ಲಿಕಟ್ಟು ಪ್ರತಿಭಟನೆ ಸರಿಯಾದ ಪಾಠದಂತಿದ್ದು, ಈ ದೇಶದಲ್ಲಿ ಏಕರೂಪ ಸಮಾನ ನಾಗರೀಕ ಸಂಹಿತೆ ಹೇರಿಕೆ ಮಾಡಲು ಸಾಧ್ಯವಿಲ್ಲ. ಇಲ್ಲಿ ವಿವಿಧ ಧರ್ಮೀಯರಿದ್ದು, ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಅಸಾದುದ್ದೀನ್ ಒವೈಸಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಕುಖ್ಯಾತಿ ಪಡೆದಿದ್ದು, ಅವರ ಇಂದಿನ ಟ್ವೀಟ್ ಅಚ್ಚರಿ ಮೂಡಿಸಿದೆ.
ಕೇಂದ್ರ ಸರ್ಕಾರದ ಕಾನೂನು ಸಮಿತಿಯಿಂದ ಸಮಾನ ನಾಗರೀಕ ಸಂಹಿತೆ ಜಾರಿಗೊಳಿಸುವ ನಿರ್ಧಾರವನ್ನು ವಿವಿಧ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಏಕರೂಪ ನಾಗರೀಕ ಸಂಹಿತೆಯನ್ನು ಜಾರಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಸಮುದಾಯದ ಮೇಲೆ ಯುದ್ಧ ಸಾರಲು ಹೋರಟಿದ್ದಾರೆ ಎಂದು ಟೀಕಿಸಿದ್ದವು.