

ನವದೆಹಲಿ: ಮೊಬೈಲ್ ಡೆಲಿವರಿ ಮಾಡಲು ಬಂದಿದ್ದ ಯುವಕನನ್ನು ಥಳಿಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಶುಕ್ರವಾರ ಬಂಧನಕ್ಕೊಳಪಡಿಸಲಾಗಿದೆ.
ವಾಯುವ್ಯ ದೆಹಲಿಯ ಸ್ವರೂಪ್ ನಗರದಲ್ಲಿ ಡೆಲಿವರಿ ಮಾಡಲು ಬಂದಿದ್ದ ಯುವಕನೊಬ್ಬನನ್ನು ನಾಲ್ವರು ವಿದ್ಯಾರ್ಥಿಗಳು ಥಳಸಿದ್ದರು. ಅಲ್ಲದೆ. ಡೆಲಿವರಿ ಮಾಡಲು ತಂದಿದ್ದ ದುಬಾರಿ ಬೆಲೆಯ ಮೊಬೈಲ್ ನ್ನು ಕಳ್ಳತನ ಮಾಡಿದ್ದರು.
ಸೆಲ್ವಿನ್ ಸಂತ್ರಸ್ತ ಯುವಕನಾಗಿದ್ದು, ರೂ.26 ಸಾವಿರ ಮೌಲ್ಯದ ಮೊಬೈಲ್ ವೊಂದನ್ನು ಡೆಲಿವರಿ ಮಾಡಲು ಹೋಗಿದ್ದ. ಈ ವೇಳೆ ವಿದ್ಯಾರ್ಥಿಗಳು ಆತನನ್ನು ಹಿಂಬಾಲಿಸಿದ್ದಾರೆ, ಅನುಮಾನಗೊಂಡ ಆತ ವಿದ್ಯಾರ್ಥಿಗಳ ಬೈಕ್ ಸಂಖ್ಯೆಯನ್ನು ದಾಖಲಿಸಿಕೊಂಡಿದ್ದಾನೆ. ನಂತರ ಮೊಬೈಲ್ ಡೆಲಿವರಿ ಮಾಡಲು ಯುವಕ ಹೋದಾಗ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿರುವ ವಿದ್ಯಾರ್ಥಿಗಳು ಆತನಿಗೆ ಥಳಿಸಿ ಮೊಬೈಲ್ ಕಳ್ಳತನ ಮಾಡಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರ ಬಳಿ ಹೇಳಿಕೆ ನೀಡಿರುವ ಸೆಲ್ವಿನ್, ದರೋಡೆ ಮಾಡಿದ್ದ ವಿದ್ಯಾರ್ಥಿಗಳು ಮೊಬೈಲ್ ಆರ್ಡರ್ ಮಾಡಿದ್ದ ಯುವಕನ ಗೆಳೆಯರೇ ಆಗಿದ್ದಾರೆಂದು ಹೇಳಿದ್ದಾನೆ. ನಂತರ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣ ಸಂಬಂಧ ಇದೀಗ ಪೊಲೀಸರು ನಾಲ್ವರು ವಿದ್ಯಾರ್ಥಿಗಳನ್ನು ಬಂಧನಕ್ಕೊಳಪಡಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ವಿದ್ಯಾರ್ಥಿಗಳು ದೆಹಲಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಹಾಗೂ ಬಿಎ ಪದವಿ ಮಾಡುತ್ತಿದ್ದಾರೆಂದು ಪೊಲೀಸರು ಹೇಳಿದ್ದಾರೆ.