ಶೇ.50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ: ರವಿಶಂಕರ್ ಪ್ರಸಾದ್

ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಿದ ಬಳಿಕ ಶೇ.50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
Updated on: 

ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಿದ ಬಳಿಕ ಶೇ.50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು (Common Services Centres-CSC) ಹಮ್ಮಿಕೊಂಡಿದ್ದ ವಿಶೇಷ ಆಧಾರ್ ಸೇವಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ  ರವಿಶಂಕರ್ ಪ್ರಸಾದ್ ಅವರು, ಕೇಂದ್ರ ಸರ್ಕಾರದ ಆಧಾರ್ ಕಡ್ಡಾಯ ನಿರ್ಧಾರ ಘೋಷಣೆ ಬಳಿಕ ಈ ವರೆಗೂ ಶೇ.50ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಣೆಯಾಗಿದೆ ಎಂದು ಹೇಳಿದ್ದಾರೆ.

"110 ಕೋಟಿ ಬ್ಯಾಂಕ್ ಖಾತೆಗಳ ಪೈಕಿ ಈ ವರೆಗೂ ಸುಮಾರು 67 ಕೋಟಿ ಬ್ಯಾಂಕ್ ಖಾತೆದಾರರು ತಮ್ಮ ಆಧಾರ್ ನಂಬರ್ ಅನ್ನು ಖಾತೆಗಳಿಗೆ ಜೋಡಣೆ ಮಾಡಿದ್ದಾರೆ. ಈ ಪೈಕಿ ಗ್ರಾಮ ಮಟ್ಟದ ಸಾಮಾನ್ಯ ಸೇವಾ ಕೇಂದ್ರಗಳ  ಸಿಬ್ಬಂದಿಗಳ ಪಾತ್ರ ಶ್ಲಾಘನೀಯವಾಗಿದ್ದು, ಗ್ರಾಮಮಟ್ಟದಲ್ಲಿ ಸುಮಾರು 22 ಕೋಟಿ ಆಧಾರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆದಿದೆ. ಖಾಸಗಿ ಕೇಂದ್ರಗಳಿಂದಲೂ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಸರ್ಕಾರಿ ಸ್ವಾಮ್ಯದ  ಆಧಾರ್ ಸಾಮಾನ್ಯ ಸೇವಾ ಕೇಂದ್ರಗಳ ಪಾತ್ರ ಪ್ರಮುಖವಾಗಿದೆ ಎಂದು ಪ್ರಸಾದ್ ಹೇಳಿದರು.

ಅಂತೆಯೇ ಸಾಮಾನ್ಯ ಸೇವಾ ಕೇಂದ್ರಗಳ  ಸೇವೆ ಸರ್ಕಾರದ ಮತ್ತಷ್ಟು ಸೇವೆಗಳಿಗೆ ವಿಸ್ತರಿಸಬೇಕು ಎನ್ನುವುದು ಸರ್ಕಾರದ ಬಯಕೆಯಾಗಿದ್ದು, ಗ್ರಾಮೀಣಲ ಭಾಗದ ಜನತೆಗೆ ಸರ್ಕಾರದ ಸೇವೆ ಸಲ್ಲಿಸಬೇಕು ಎಂದು ಆಶಿಸಿದರು.  ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇಂದಿಗೂ ಸುಮಾರು 10 ಲಕ್ಷ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಂಖ್ಯೆಯನ್ನು ಒಂದು ಕೋಟಿಗೆ ಏರಿಸಿಕೊಂಡು ದೇಶದ ಮೂಲೆ ಮೂಲೆಯಲ್ಲೂ ತನ್ನ ಸೇವೆ ವಿಸ್ತರಿಸಬೇಕು ಎಂದು  ಹೇಳಿದರು. ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಸರ್ಕಾರದ ಸುಮಾರು 300ಕ್ಕೂ ಹೆಚ್ಚು ಸೇವೆಗಳನ್ನು ನೀಡಲಾಗುತ್ತಿದ್ದು, ಜಿಎಸ್ ಟಿ ತರಬೇತಿಯಿಂದ ಡಿಜಿಟಲ್ ಪಾವತಿಯವರೆಗಿನ ಬಹುತೇಕ ಸೇವೆಗಳು ಸಿಎಸ್ ಸಿನಲ್ಲಿ  ಲಭ್ಯವಿದೆ ಎಂದು ಹೇಳಿದರು.

ಇದೇ ವೇಳೆ ಆಧಾರ್ ಜೋಡಣೆ ಸಂಬಂಧ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಉತ್ತರಿಸಿದ ರವಿಶಂಕರ್ ಪ್ರಸಾದ್ ಅವರು, ಆಧಾರ್ ನಂಬರ್ ಅನ್ನು ಜನ್ ಧನ್ ಖಾತೆಗಳಂತಹ ಯೋಜನೆಗಳಿಗೆ  ಜೋಡಣೆ ಮಾಡಿದರೆ ನಿಖರ ಫಲಾನುಭವಿಗಳ ಖಾತೆಗೆ ನೇರವಾಗಿ ಪರಿಹಾರ ಧನ ವರ್ಗ ಮಾಡಬಹುದು. ಇದರಿಂದ ಮಧ್ಯವರ್ತಿಗಳ ಮತ್ತು ಭ್ರಷ್ಟ ಅಧಿಕಾರಿಗಳ ಹಾವಳಿ ತಪ್ಪುತ್ತದೆ. ಇದರಿಂದ ಸುಮಾರು 50 ಸಾವಿರ ಕೋಟಿ  ರು.ಗಳಷ್ಚು ಉಳಿತಾಯವಾಗಲಿದೆ ಎಂದು ಪ್ರಸಾದ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com