ಕೊಚ್ಚಿ: ಭ್ರಷ್ಟಾಚಾರ ಆರೋಪದ ಮೇಲೆ ಸಿಬಿಐ ಭ್ರಷ್ಟಾಚಾರ ನಿಗ್ರಹ ಘಟಕ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಾಷ್ಟ್ರೀಯ ಗುಣಮಟ್ಟ ಮೇಲ್ವಿಚಾರಕನನ್ನು ಗುರುವಾರ ಕೊಚ್ಚಿಯಲ್ಲಿ ಬಂಧಿಸಿದೆ.
ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದ ಮೇಲೆ ಸಿಬಿಐ ಅಧಿಕಾರಿಗಳು ರಾಷ್ಟ್ರೀಯ ಗುಣಮಟ್ಟ ಮೇಲ್ವಿಚಾರಕ ಸಂತೋಷ್ ಕುಮಾರ್ ದುಬೇ ಅವರನ್ನು ಇಂದು ವಶಕ್ಕೆ ಪಡೆದಿದ್ದು, ಆರೋಪಿಯಿಂದ 2,44,930 ರುಪಾಯಿ ನಗದು ಜಪ್ತಿ ಮಾಡಿದೆ.
ಸಿಬಿಐ ಪ್ರಕಾರ, ಮಧ್ಯಪ್ರದೇಶ ಮೂಲದ ದುಬೇ ಕೇರಳದ ತ್ರಿಸೂರ್ ಮತ್ತು ಪಲಕ್ಕಾಡ್ ಜಿಲ್ಲೆಯ ಉಸ್ತುವಾರಿಯಾಗಿದ್ದಾರೆ.
ಗುಣಮಟ್ಟ ಪ್ರಮಾಣ ಪತ್ರ ನೀಡಲು ಮೂವರು ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆಯಿಟ್ಟಿರುವ ಮಾಹಿತಿ ಪಡೆದ ಸಿಬಿಐ ಅಧಿಕಾರಿಗಳು, ದುಬೇ ಕಚೇರಿ ಮೇಲೆ ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಆರೋಪಿಯನ್ನು ಸಂಜೆ ಕೊಚ್ಚಿ ಕೋರ್ಟ್ ಗೆ ಹಾಜರುಪಡಿಸುತ್ತಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.