

ಚೆನ್ನೈ: ಭಾರತೀಯ ಸೇನೆಗೆ ಹೊಸದೊಂದು ಅಸ್ತ್ರ ಸೇರ್ಪಡೆಗೆ ಸಿದ್ಧವಾಗಿದ್ದು, ಭಾರತದ ಹೆಮ್ಮೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮೊದಲ ಬಾರಿಗೆ ಮಾನವರಹಿತ ಯುದ್ಧ ಟ್ಯಾಂಕ್ ಅಭಿವೃದ್ಧಿಪಡಿಸಿದ್ದು, ಇನ್ನು ಕೆಲ ತಿಂಗಳಲ್ಲೇ ಇದು ಸೇನೆಗೆ ಸೇರ್ಪಡೆಯಾಗಲಿದೆ.
ಡಿಆರ್ ಡಿಒದ ಈ ಮಾನವರಹಿತ ಯುದ್ಧ ಟ್ಯಾಂಕರ್ ಗೆ ಮಂತ್ರ ಎಂದು ನಾಮಕರಣ ಮಾಡಲಾಗಿದ್ದು, ಶತ್ರುಪಡೆಗಳ ಮೇಲೆ ಬೇಹುಗಾರಿಕೆ ನಡೆಸಲು, ವಿಪತ್ತು ನಿರ್ವಹಣೆ, ಭೂ ಸರ್ವೆಕ್ಷಣೆಯಲ್ಲೂ ಇದು ನೆರವಾಗಲಿದೆ. ಮಂತ್ರ ಯುದ್ಧ ಟ್ಯಾಂಕರ್ ಸಂಪೂರ್ಣ ದೇಶಿಯ ನಿರ್ಮಿತ ಟ್ಯಾಂಕರ್ ಆಗಿದ್ದು, ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿಯಲ್ಲಿ ಈ ಮಂತ್ರ ಟ್ಯಾಂಕರ್ ಗಳನ್ನು ಸಂಶೋಧಿಸಲಾಗಿದೆ.
ಗಡಿಯಲ್ಲಿ ಚೀನಾ ಹಾಗೂ ಪಾಕಿಸ್ತಾನದಿಂದ ನಿರಂತರ ಕಿರುಕುಳ ಅನುಭವಿಸುತ್ತಿರುವ ಭಾರತಕ್ಕೆ ಈ ಅತ್ಯಾಧುನಿಕ ಟ್ಯಾಂಕರ್ ಗಳು ನೆರವಾಗಲಿದ್ದು, ಭಾರತದ ಭದ್ರತೆ ಮತ್ತೊಂದು ಸುತ್ತು ಗಟ್ಟಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಂತ್ರ ಟ್ಯಾಂಕರ್ ಗಳು ಯುದ್ಧದ ಸಂದರ್ಭದಲ್ಲಿ ಶತ್ರುಗಳ ಚಲನವಲನ, ಬಾಂಬ್ ಪತ್ತೆ, ಪರಮಾಣು ಮತ್ತು ಜೈವಿಕ ಅಸ್ತ್ರ ಬಳಕೆಯಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಿವೆಯಂತೆ. ರಿಮೋಟ್ ಮೂಲಕ ನಿಯಂತ್ರಿಸಬಹುದಾದ ಮಾನವರಹಿತ ಟ್ಯಾಂಕ್ ಇದಾಗಿದ್ದು, ಡಿಆರ್ಡಿಒ ಚೆನ್ನೈನ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಸೇನೆಯ ಯುದ್ಧವಾಹನಗಳ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಸಿವಿಆರ್ಡಿಇ) ಈ ಟ್ಯಾಂಕನ್ನು ರಾಜಸ್ಥಾನದ ಅತಿ ಹೆಚ್ಚು ಉಷ್ಣತೆ ಹೊಂದಿರುವ (52 ಡಿಗ್ರಿ ಸೆಲ್ಸಿಯಸ್) ಮರಳುಗಾಡು ಪ್ರದೇಶದಲ್ಲಿ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಈ ಮಂತ್ರ ಟ್ಯಾಂಕರ್ ಉತ್ತಮ ಸಾಧನೆ ಮಾಡಿದೆ ಎಂದು ಹೇಳಲಾಗುತ್ತಿದೆ. ಇನ್ನು ಅರೆಸೇನಾಪಡೆಗಳಲ್ಲಿ ನಿಯೋಜನೆಯಾಗುವ ಮಂತ್ರ ಟ್ಯಾಂಕರ್ ಗಳಲ್ಲಿ ಕೆಲ ಮಾರ್ಪಾಡು ಮಾಡುವ ಮೂಲಕ ನಕ್ಸಲ್ ವಿರುದ್ಧದ ಕಾರ್ಯಾಚರಣೆಗೂ ಬಳಸಿಕೊಳ್ಳುವ ಇಂಗಿತವನ್ನು ಸೇನೆ ವ್ಯಕ್ತಪಡಿಸಿದೆ.
ರಿಮೋಟ್ ನಿಯಂತ್ರಣ
ರಿಮೋಟ್ ಮೂಲಕ ನಿಯಂತ್ರಿಸಲಾಗುವ ಮಂತ್ರ ಟ್ಯಾಂಕರ್ ನಲ್ಲಿ ರಾಡಾರ್, ಲೇಸರ್ ಮೂಲಕ ಗುರಿ ಪತ್ತೆ ಹಚ್ಚುವ ವಿಶೇಷ ಸಂಯೋಜಿತ ಕ್ಯಾಮರಾ ಇದೆ. ಮಂತ್ರ ಟ್ಯಾಂಕರ್ ಭೂಮಿಯ ಮೇಲೆ 15 ಕಿ.ಮೀ. ವ್ಯಾಪ್ತಿಯಲ್ಲಿ ಶತ್ರು ರಾಷ್ಟ್ರಗಳ ಸೈನಿಕರ ಚಲನವಲನ, ಭಾರಿ ವಾಹನಗಳನ್ನು ಪತ್ತೆಹಚ್ಚಲಿದೆ. ಜತೆಗೆ ಬೇಹುಗಾರಿಕೆ ಕಾರ್ಯದಲ್ಲೂ ಭದ್ರತಾ ಪಡೆಗಳಿಗೆ ನೆರವಾಗಲಿದೆ. ಚೆನ್ನೈನಲ್ಲಿನ ವಸ್ತುಪ್ರದರ್ಶನದಲ್ಲಿ ರಿಮೋಟ್ ಕಮಾಂಡ್ ಸೆಂಟರ್ ಹೊಂದಿರುವ ಸಿಸಿಪಿಟಿ ಯಂತ್ರ ಪ್ರದರ್ಶಿಸಲಾಗಿದೆ. ಜತೆಗೆ ವಿವಿಧ ಮಾದರಿಯ ಲೇಸರ್ ಶಸ್ತ್ರಾಸ್ತ್ರಗಳು, ಗೋಡೆಯ ಮೂಲಕ ನೋಡಬಹುದಾದ ಪುಟ್ಟ ರಾಡಾರ್ ಉಪಕರಣ, ಯುದ್ಧ ಮತ್ತು ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಬಳಸುವ ವಿವಿಧ ಮಾದರಿ ರಕ್ಷಣಾ ಉಪಕರಣಗಳನ್ನು ಕೂಡ ಪ್ರದರ್ಶಿಸಲಾಗಿದೆ.
ಮಂತ್ರದಲ್ಲಿವೆ ಮೂರು ಮಾದರಿ ಟ್ಯಾಂಕರ್ ಗಳು
ಕಾರ್ಯನಿರ್ವಹಣೆ ಮತ್ತು ಅನ್ವಯಕ್ಕೆ ಅನುಗುಣವಾಗಿ ಮಂತ್ರ ಟ್ಯಾಂಕರ್ ಗಳನ್ನು ಮೂರು ಮಾದರಿಗಳಾಗಿ ಅಭಿವೃದ್ಧಿಪಡಿಸಲಾಗಿದ್ದು, ಮಂತ್ರ-ಎಸ್, ಮಂತ್ರಾ- ಎಂ, ಮಂತ್ರಾ-ಎನ್ ಎಂದು ವಿಂಗಡಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅದರಂತೆ ಮಂತ್ರ-ಎಸ್ ವಿಪತ್ತು ನಿರ್ವಹಣೆ ಮತ್ತು ರಕ್ಷಣಾ ಕಾರ್ಯಕ್ಕೆ ಬಳಸಲಾಗುವ ಟ್ಯಾಂಕರ್ ಆಗಲಿದ್ದು, ದೇಶದ ಮೊದಲ ಮಾನವರಹಿತ ಟ್ಯಾಂಕರ್ ಆಗಿದೆ. ಇನ್ನು ಮಂತ್ರ-ಎಂ ಭೂ ಸರ್ವೆಕ್ಷಣೆ, ಖನಿಜ ನಿಕ್ಷೇಪ ಪತ್ತೆಯಂತಹ ಕಾರ್ಯಗಳಿಗೆ ಬಳಕೆಯಾಗಲಿದೆ ಮತ್ತು ಮಂತ್ರ-ಎನ್ ಪರಮಾಣು ಮತ್ತು ಜೈವಿಕ ಅಸ್ತ್ರಗಳ ಸಮಸ್ಯೆಯಿರುವ ಪ್ರದೇಶಗಳಲ್ಲಿ ಬಳಸಲು ಅನುಕೂಲವಾಗುವಂತೆ ರೂಪಿಸಲಾಗಿದೆ ಎಂದು ಡಿಆರ್ ಡಿಒ ತಿಳಿಸಿದೆ.