

ಲಂಡನ್: ತಾನು ಟೀಂ ಇಂಡಿಯಾದ ಟೆಸ್ಟ್ ತಂಡದ ನಾಯಕನಾದ ವಿಚಾರವನ್ನು ಅನುಷ್ಕಾ ಶರ್ಮಾಗೆ ಹೇಳುವಾಗ ನಿಜಕ್ಕೂ ಭಾವುಕನಾಗಿದ್ದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಹಕ್ಕಿಗಳು ಎಂದು ಎಲ್ಲರಿಗೂ ತಿಳಿದಿದ್ದೇ ಆದರೂ ಇಬ್ಬರೂ ಈ ಬಗ್ಗೆ ಯಾವುದೇ ಕಾರ್ಯಕ್ರಮದಲ್ಲೂ ಹೇಳಿಕೆ ನೀಡಿರಲಿಲ್ಲ. ಆದರೆ ಇದೇ ಮೊದಲು ಎಂಬಂತೆ ವಿರಾಟ್ ಕೊಹ್ಲಿ ತಮ್ಮ ಮತ್ತು ಅನುಷ್ಕಾರ ನಡುವಿನ ಸಂಬಂಧವನ್ನು ಪರೋಕ್ಷವಾಗಿ ಬಿಚ್ಚಿಟ್ಟಿದ್ದು, ತಾವು ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕನಾದ ವಿಚಾರವನ್ನು ಆಕೆಗೆ ಹೇಳುವಾಗ ತುಂಬಾ ಭಾವುಕನಾಗಿದ್ದೆ ಎಂದು ಹೇಳಿದ್ದಾರೆ.
ಪ್ರಸ್ತುತ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಿಮಿತ್ತ ಲಂಡನ್ ನಲ್ಲಿರುವ ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್ ಗೆ ವಿಶೇಷ ಸಂದರ್ಶನ ನೀಡಿದ್ದು, ಈ ವೇಳೆ ತಮ್ಮ ನಾಯಕತ್ವದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಟೀಂ ಇಂಡಿಯಾ ನಾಯಕರಾದ ಕ್ಷಣಗಳನ್ನು ತಾವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಆ ಸಂದರ್ಭದಲ್ಲಿ ನಾವು ಮೊಹಾಲಿ ಟೆಸ್ಟ್ ಪಂದ್ಯವಾಡುತ್ತಿದ್ದೆ. ಅದೇ ಸಂದರ್ಭದಲ್ಲಿ ಅನುಷ್ಕಾ ಕೂಡ ಅಚಾನಕ್ಕಾಗಿ ಆಗಮಿಸಿದ್ದರು. ಟೀಂ ಇಂಡಿಯಾ ನಾಯಕನಾಗಿ ಆಯ್ಕೆಯಾದ ವಿಚಾರ ಆಗ ನನಗಿ ತಿಳಿಯಿತು. ಕೂಡಲೇ ಈ ವಿಚಾರವನ್ನು ಅನುಷ್ಕಾಗೆ ಹೇಳಬೇಕು ಎನ್ನಿಸಿತು. ಆಕೆಯ ಬಳಿ ಈ ವಿಚಾರವನ್ನು ಹೇಳುತ್ತಿದ್ದಾಗ ನಾನು ನಿಜಕ್ಕೂ ಭಾವುಕನಾಗಿದ್ದೆ. ನನ್ನ ಕಣ್ಣಲ್ಲಿ ನೀರು ತುಂಬಿತ್ತು. ಆ ಕ್ಷಣವನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ನನ್ನ ಜೀನವನದಲ್ಲಿ ಇಂತಹುದೊಂದು ಕ್ಷಣ ಬರುತ್ತದೆ ಎಂದು ಎಂದು ಕನಸಿನಲ್ಲೂ ಭಾವಿಸಿರಲಿಲ್ಲ. ಮೊಹಾಲಿ ಪಂದ್ಯ ಮತ್ತು ಆ ಕ್ಷಣಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಇದಾದ ಕೆಲವೇ ತಿಂಗಳ ಬಳಿಕ ಎಂಎಸ್ ಧೋನಿ ಸೀಮಿತ ಓವರ್ ಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಳಿಕ ಕೊಹ್ಲಿಗೆ ನಾಯಕತ್ವ ಸ್ಥಾನ ನೀಡಲಾಗಿತ್ತು.