ನವದೆಹಲಿ: ದೇಶಾದ್ಯಂತ ಸಾಲಮನ್ನಾಕ್ಕೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಗಳಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಪ್ರಸಕ್ತ ವರ್ಷ ಅಲ್ಪಾವಧಿ ಬೆಳೆಸಾಲಕ್ಕೂ ಬಡ್ಡಿ ವಿನಾಯ್ತಿ ನೀಡಲು ನಿರ್ಧರಿಸಿದೆ. ಜೊತೆಗೆ ಬೆಳ ಸಾಲ ಯೋಜನೆ ಮುಂದುವರಿಕೆಗೆ ತೀರ್ಮಾನಿಸಿದೆ
ಅಲ್ಪಾವಧಿ ಸಾಲದ ಬಡ್ಡಿಯಲ್ಲಿ ಗರಿಷ್ಠ ಶೇ 5ರ ವರೆಗೆ ರಿಯಾಯತಿ (ಸಬ್ಸಿಡಿ) ನೀಡಲು ಕೇಂದ್ರ ಸಂಪುಟ ಅನಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆ ಈ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಗರಿಷ್ಠ ರು. 3 ಲಕ್ಷದವರೆಗಿನ ಅಲ್ಪಾವಧಿ (ಒಂದು ವರ್ಷ ಅವಧಿಯ) ಬೆಳೆಸಾಲದ ಬಡ್ಡಿಯಲ್ಲಿ ಶೇ 2ರಷ್ಟು ರಿಯಾಯತಿ ನೀಡುವ ಈ ಯೋಜನೆ 2017–18ನೇ ಸಾಲಿಗೂ ಮುಂದುವರಿಯಲಿದೆ. ಇದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೊಕ್ಕಸದ ಮೇಲೆ ರು. 20,339 ಕೋಟಿ ಹೊರೆ ಬೀಳಲಿದೆ.
ಸದ್ಯ ಬೆಳೆಸಾಲದ ಮೇಲೆ ಶೇ 9ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. ಎಲ್ಲ ರೈತರಿಗೂ ಶೇ 2 ರಷ್ಟು ಸಬ್ಸಿಡಿ ಸಿಕ್ಕರೆ, ಶೇ 9ರ ಬದಲು ಶೇ7ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ.
ಸಕಾಲದಲ್ಲಿ ಸಾಲ ಹಿಂದಿರುಗಿಸುವ ರೈತರಿಗೆ ಹೆಚ್ಚುವರಿಯಾಗಿ ಶೇ 3ರಷ್ಟು ಅಂದರೆ, ಶೇ 5ರಷ್ಟು ಸಬ್ಸಿಡಿ ದೊರೆಯಲಿದೆ. ಅಂತಹ ರೈತರು ಕೇವಲ ಶೇ4ರಷ್ಟು ಬಡ್ಡಿ ಪಾವತಿಸಿದರೆ ಸಾಕು.
ಪ್ರಕೃತಿ ವಿಕೋಪದಿಂದ ತೊಂದರೆಗೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ. ಬೆಳೆ ಸಾಲದ ಜೊತೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿಮೆಯನ್ನು ಲಿಂಕ್ ಮಾಡಲಾಗಿದೆ.
ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಪಡೆದ ಬೆಳೆ ಸಾಲಕ್ಕೆ ಈ ಸೌಲಭ್ಯ ದೊರೆಯಲಿದೆ. ರು 3 ಲಕ್ಷದವರೆಗಿನ ಬೆಳೆಸಾಲಕ್ಕೆ ಈ ಸಬ್ಸಿಡಿ ದೊರೆಯಲಿದ್ದು, ಒಂದು ವರ್ಷ ಈ ಯೋಜನೆ ಜಾರಿಯಲ್ಲಿರುತ್ತದೆ.