

ವಾಷಿಂಗ್ಟನ್: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸಕ್ಕೂ ಮೊದಲೇ ಅಮೆರಿಕ ದೇಶ ಭಾರತಕ್ಕೆ 22 ಗಾರ್ಡಿಯನ್ ಡ್ರೋನ್ ಗಳನ್ನು ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದೆ.
ರಕ್ಷಣಾ ವಲಯದಲ್ಲಿ "ದಿ ಗೇಮ್ ಚೇಂಜರ್" ಎಂದೇ ಖ್ಯಾತ ಪಡೆದಿರುವ ಗಾರ್ಡಿಯನ್ ಡ್ರೋನ್ ಗಳನ್ನು ಭಾರತಕ್ಕೆ ಮಾರಾಟ ಮಾಡುವ ಕುರಿತು ಅಮೆರಿಕ ಒಪ್ಪಿಗೆ ನೀಡಿದ್ದು, ಸುಮಾರು 22 ಗಾರ್ಡಿಯನ್ ಡ್ರೋನ್ ಗಳು ಶೀಘ್ರದಲ್ಲೇ ಭಾರತೀಯ ಸೇನೆಯ ಬತ್ತಳಿಕೆ ಸೇರಲಿವೆ. ಇದು 13,000 ದಿಂದ 19,000 ಕೋಟಿ ರು. (2 ರಿಂದ 3 ಬಿಲಿಯನ್ ಡಾಲರ್)ಮೊತ್ತದ ಒಪ್ಪಂದವಾಗಿದ್ದು, ಈ ಒಪ್ಪಂದಕ್ಕೆ ಅಮೆರಿಕ ವಿದೇಶಾಂಗ ಇಲಾಖೆ ಬುಧವಾರ ಒಪ್ಪಿಗೆ ನೀಡಿದೆ. ಅಂತೆಯೇ ಭಾರತ ಸರ್ಕಾರಕ್ಕೆ ಈ ನಿರ್ಧಾರವನ್ನು ಕೂಡ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಭಾರತದೊಂದಿಗೆ ಮಾಡಿಕೊಂಡ ಮೊದಲ ಪ್ರಮುಖ ಒಪ್ಪಂದ ಇದು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಹಿಂದಿನ ಒಬಾಮಾ ಆಡಳಿತಕ್ಕೆ ಹೋಲಿಸಿದರೆ ಟ್ರಂಪ್ ಸರ್ಕಾರ ಭಾರತದೊಂದಿಗೆ ಆಶ್ವಾಸನೆಗಳಿಗಿಂತ ಹೆಚ್ಚು ಫಲಿತಾಂಶ ಕೇಂದ್ರೀಕೃತವಾಗಿರುವ ಬಗ್ಗೆ ಸುಳಿವು ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಒಬಾಮ ಆಡಳಿತದ ಸಂದರ್ಭದಲ್ಲೇ ಅಮೆರಿಕ ಕಾಂಗ್ರೆಸ್ ಭಾರತಕ್ಕೆ ಪ್ರಿಡೇಟರ್ ಡ್ರೋನ್ ಗಳನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು.