ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾಥ್ ಕೋವಿಂದ್ ನಾಮಪತ್ರ ಸಲ್ಲಿಕೆ

ಮಾಜಿ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಅಧಿಕೃತವಾಗಿ ರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಅಭ್ಯರ್ಥಿಯಾಗಿ...
ನಾಮಪತ್ರ ಸಲ್ಲಿಸಿದ ರಾಮನಾಥ್ ಕೋವಿಂದ್ (ಚಿತ್ರಕೃಪೆ: ಲೋಕಸಭಾ ಟಿವಿ)
ನಾಮಪತ್ರ ಸಲ್ಲಿಸಿದ ರಾಮನಾಥ್ ಕೋವಿಂದ್ (ಚಿತ್ರಕೃಪೆ: ಲೋಕಸಭಾ ಟಿವಿ)
Updated on: 

ನವದೆಹಲಿ: ಮಾಜಿ ಬಿಹಾರ ರಾಜ್ಯಪಾಲ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಅಧಿಕೃತವಾಗಿ ರಾಷ್ಟ್ರಪತಿ ಹುದ್ದೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದರು.

ದೆಹಲಿ ಸಂಸತ್ ಭವನಕ್ಕೆ ಆಗಮಿಸಿದ ರಾಮನಾಥ್ ಕೋವಿಂದ್ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಗಣ್ಯರ  ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದರು. ರಾಮನಾಥ್ ಕೋವಿಂದ್ ಅವರ ರಾಷ್ಟ್ರಪತಿ ಅಭ್ಯರ್ಥಿ ಅರ್ಜಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಪ್ರಸ್ತಾವಕರಾಗಿ ಸಹಿ ಮಾಡಿದ್ದು, ಕೇಂದ್ರ ಗೃಹ ಸಚಿವ ರಾಜ್ ನಾಥ್  ಸಿಂಗ್ ಅವರು ದ್ವಿತೀಯ ಪ್ರಸ್ತಾವಕರಾಗಿ ಸಹಿ ಹಾಕಿದ್ದಾರೆ.

ಒಟ್ಟು ನಾಲ್ಕು ಪ್ರತಿಗಳಲ್ಲಿ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು, ಪ್ರತೀ ನಾಮಪತ್ರದ ಪ್ರತಿಯಲ್ಲೂ ಕನಿಷ್ಟ 50 ಮಂದಿ ಜನಪ್ರತಿನಿಧಿಗಳು ಪ್ರಸ್ತಾವಕರಾಗಿ ಸಹಿ ಮಾಡಿದ್ದಾರೆ ಎನ್ನಲಾಗಿದೆ. ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಹಿರಿಯ  ಮುಖಂಡ ಎಲ್ ಕೆ ಅಡ್ವಾಣಿ, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯನಾಯ್ಡು, ಹಾಗೂ ಎನ್ ಡಿಎ ಮೈತ್ರಿಕೂಟದ ಅಕಾಲಿ ದಳದ ಪ್ರಕಾಶ್ ಸಿಂಗ್ ಬಾದಲ್, ಆಂಧ್ರ  ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉಪಸ್ಥಿತರಿದ್ದರು.

ಇನ್ನು ಆಡಳಿತಾ ರೂಢ ಎನ್ ಡಿಎಯ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರಿಗೆ ಈಗಾಗಲೇ ತಮಿಳುನಾಡಿನ ಎಐಎಡಿಎಂಕೆ ಪಕ್ಷ, ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್,  ಒಡಿಶಾದ ಆಡಳಿತಾ ರೂಢ ಬಿಜು ಜನತಾದಳ ಪಕ್ಷಗಳು ಬೆಂಬಲ ಘೋಷಿಸಿವೆ. ರಾಮನಾಥ್ ಕೋವಿಂದ್ ಅವರ ಪ್ರತಿಸ್ಪರ್ಧಿಯಾಗಿ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಕಾಂಗ್ರೆಸ್ ಪರವಾಗಿ ಕಣಕ್ಕಿಳಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com