ಬಿಹಾರದ ಈ ಗ್ರಾಮದಲ್ಲಿ ಎಸಿ, ಗೀಸರ್, ಕಾರು ಎಲ್ಲ ಇದೆ, ಆದರೆ ಶೌಚಾಲಯ ಮಾತ್ರ ಇಲ್ಲ!

ಬಿಹಾರದ ಈ ಪ್ರಮುಖ ಗ್ರಾಮದಲ್ಲಿನ ಮನೆಗಳಲ್ಲಿ ಎಸಿ, ಗೀಸರ್, ಕಾರು ಸೇರಿದಂತೆ ಎಲ್ಲ ಆಧುನಿಕ ಮೂಲ ಸೌಕರ್ಯಗಳಿವೆಯಾದರೂ, ಈ ಗ್ರಾಮದ ಯಾವುದೇ ಮನೆಯಲ್ಲೂ ಶೌಚಾಲಯ ಮಾತ್ರ ಇಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪಾಟ್ನಾ: ಬಿಹಾರದ ಈ ಪ್ರಮುಖ ಗ್ರಾಮದಲ್ಲಿನ ಮನೆಗಳಲ್ಲಿ ಎಸಿ, ಗೀಸರ್, ಕಾರು ಸೇರಿದಂತೆ ಎಲ್ಲ ಆಧುನಿಕ ಮೂಲ ಸೌಕರ್ಯಗಳಿವೆಯಾದರೂ, ಈ ಗ್ರಾಮದ ಯಾವುದೇ ಮನೆಯಲ್ಲೂ ಶೌಚಾಲಯ ಮಾತ್ರ ಇಲ್ಲ.

ಅಚ್ಚರಿಯಾದರೂ ಇದು ಹೌದು..ಗ್ರಾಮದ ಸಾಮಾನ್ಯ ಜನರ ಮನೆಯಷ್ಟೇ ಅಲ್ಲ...ಊರಿನ ಹಿರಿಯರ ಮನೆ ಹಾಗೂ ಊರಿನ ಶ್ರೀಮಂತರ ಮನೆಯಲ್ಲೂ ಶೌಚಾಲಯಗಳಿಲ್ಲವಂತೆ. ಇಷ್ಟಕ್ಕೂ ಯಾವುದೀ ಗ್ರಾಮ ಎಂದರೆ ಬಿಹಾರದ  ನಾವಾಡದಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಗಾಝಿಪುರದಲ್ಲಿ... ಈ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿದ್ದು, ಒಂದೇ ಒಂದು ಕುಟುಂಬದ ಮನೆಯಲ್ಲೂ ಕೂಡ ಶೌಚಾಲಯವಿಲ್ಲ..

ಕೇಂದ್ರ ಸರ್ಕಾರವೇನೋ ಬಯಲು ಶೌಚ ಮುಕ್ತ ಗ್ರಾಮಕ್ಕಾಗಿ ಸಾವಿರಾರು ಕೋಟಿ ರು ವ್ಯಯಿಸಿ ಯೋಜನೆ ರೂಪಿಸಿದೆ. ಆದರೆ ಈ ಗ್ರಾಮದಲ್ಲಿ ಮಾತ್ರ ಅದರ ಜಾರಿ ಮಾತ್ರ ಎಲ್ಲೂ ಕಾಣುತ್ತಿಲ್ಲ. ಜಾರಿಯಾಗುವ ಲಕ್ಷಣಗಳು ಕೂಡ  ಗೋಚರಿಸುತ್ತಿಲ್ಲ. ಅಂದಹಾಗೆ ಈ ಗ್ರಾಮದ ಹಿರಿಯರಿಗೆ ಮತ್ತು ಗ್ರಾಮದ ಶ್ರೀಮಂತರಿಗೆ ಕೇಂದ್ರ ಸರ್ಕಾರದ ಈ ಯೋಜನೆ ತಿಳಿದಿಲ್ಲ ಎಂದೇನೂ ಅಲ್ಲ..ಸರ್ಕಾರದ ಎಲ್ಲ ಯೋಜನೆಗಳ ಪರಿಚಯ ಇವರಿಗಿದೆ. ಹೀಗಿದ್ದೂ ಶೌಚಾಲಯ  ನಿರ್ಮಾಣವೇಕಿಲ್ಲ ಎಂದರೆ ಅವರಲ್ಲಿರುವ ಭೀತಿ..

ಹೌದು.. ಗಾಜಿಪುರ ಗ್ರಾಮದಲ್ಲಿ ಮನೆಯಲ್ಲಿ ಯಾರಾದರೂ ಶೌಚಾಲಯ ನಿರ್ಮಿಸಿದರೆ ಆ ಮನೆಯಲ್ಲಿ ಯಾರಾದರೂ ಒಬ್ಬರು ಅಕಾಲಿಕ ಮರಣಕ್ಕೆ ತುತ್ತಾಗುತ್ತಾರಂತೆ. ಹೀಗಾಗಿಯೇ ಇಲ್ಲಿನ ಗ್ರಾಮಸ್ಥರು ಯಾವುದೇ ಕಾರಣಕ್ಕೂ  ಮನೆಗಳಲ್ಲಿ ಶೌಚಾಲಯ ನಿರ್ಮಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದಕ್ಕೆ ಸಾಕಷ್ಟು ಉದಾಹರಣೆಗಳನ್ನೂ ಕೂಡ ನೀಡುವ ಗ್ರಾಮಸ್ಥರು, 28 ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಗ್ರಾಮಸ್ಥರು ಹೇಳುವಂತೆ   1988ರಲ್ಲಿ ಗ್ರಾಮದ ನಿವಾಸಿ ಸಿದ್ದೇಶ್ವರ ಸಿಂಗ್ ಎಂಬಾತ ತನ್ನ ಮನೆಯಲ್ಲಿ ಶೌಚಾಲಯ ನಿರ್ಮಿಸುತ್ತಿದ್ದ. ಈ ವೇಳೆ ಆತನ ಮಗ ಅಕಾಲಿಕ ಮರಣಕ್ಕೆ ತುತ್ತಾಗಿದ್ದ. ಈ ಕಾರಣಕ್ಕೆ ಆತ ಶೌಚಾಲಯ ನಿರ್ಮಾಣ ಕಾರ್ಯವನ್ನು ಅರ್ಧಕ್ಕೆ  ನಿಲ್ಲಿಸಿದ್ದ. ಇನ್ನು ಈಗ್ಗೆ ಕೆಲವು ತಿಂಗಳ ಹಿಂದಷ್ಟೇ ಇಲ್ಲಿನ ನಿವಾಸಿ ಶ್ಯಾಮ್ ದೇವ್ ಸಿಂಗ್ ಎಂಬಾತ ಕೂಡ ಶೌಚಾಲಯ ನಿರ್ಮಿಸುವಾಗ ಅತನ ಮಗ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದ. ಹೀಗಾಗಿ ಈ ಗ್ರಾಮದ ಯಾರೂ ಕೂಡ  ಶೌಚಾಲಯ ನಿರ್ಮಾಣಕ್ಕೆ  ಮುಂದಾಗಿಲ್ಲ.

ಈ ಮೌಢ್ಯಕ್ಕೆ ಇಂಬು ನೀಡುವಂತೆ ಇಲ್ಲಿನ ಗ್ರಾಮದ ಮುಖಂಡರೇ ಊರಿನ ಹೊರವಲಯದ ಗದ್ದೆಯನ್ನು ಎರಡು ಭಾಗವಾಗಿ ವಿಂಗಡಿಸಿ ಒಂದು ಕಡೆ ಗಂಡಸರಿಗಾಗಿ ಮತ್ತೊಂದು ಕಡೆ ಹೆಂಗಸರಿಗಾಗಿ ಬಹಿರ್ದೆಸೆಗೆ ಜಾಗ  ಮಾಡಿಕೊಟ್ಟಿದ್ದಾರೆ.

ಈ ಗ್ರಾಮದ ಗಂಡುಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ

ಇನ್ನು ಈ ಗ್ರಾಮದಲ್ಲಿನ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಹಲವು ಯುವಕರು ಹೇಳಿಕೊಂಡಿದ್ದಾರೆ. ಕಾರಣ ಇಲ್ಲಿ ಶೌಚಾಲಯಗಳಿಲ್ಲ. ಹೀಗಾಗಿ ಬೇರೆ ಗ್ರಾಮಸ್ಥರು ಇಲ್ಲಿನ ಯುವಕರಿಗೆ ಹೆಣ್ಣು ನೀಡುತ್ತಿಲ್ಲ. ಇನ್ನು  ಹೇಗೋ ಮದುವೆ ಮಾಡಿಕೊಂಡು ಬಂದ ಹೆಣ್ಣುಮಕ್ಕಳು ಶೌಚಾಲಯ ನಿರ್ಮಿಸುವಂತೆ ಒತ್ತಡ ಹಾಕುತ್ತಾರೆ. ಆದರೆ ಇಲ್ಲಿನ ನಿವಾಸಿಗಳು ಮಾತ್ರ ಶೌಚಾಲಯ ನಿರ್ಮಾಣ ಮಾಡಲು ಬಿಡುವುದಿಲ್ಲ ಎಂಬ ಮಾತು ಕೂಡ  ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com