

ನವದೆಹಲಿ: ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಜಿಎಸ್ ಟಿ ಜಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ರಾತ್ರಿ 12 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ನ ವಿಶೇಷ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) ಗೆ ಚಾಲನೆ ನೀಡಲಿದ್ದಾರೆ.
ದಶಕಗಳಿಂದ ಚಾಲ್ತಿಯಲ್ಲಿದ್ದ ಹಳೆ ತೆರಿಗೆ ಪದ್ಧತಿಗೆ ಬದಲಾಗಿ ಈಗಿನ ಸ್ಥಿತಿಗೆ ಅನ್ವಯವಾಗುವಂತೆ ಪರಿಷ್ಕರಿಸಲಾಗಿರುವ ಹೊಸ ಸರಕು ಮತ್ತು ಸೇವಾ ತೆರಿಗೆ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಜಿಎಸ್ ಟಿ ಜಾರಿಗೆ ಇಂದು ಮಧ್ಯರಾತ್ರಿ ವಿಶೇಷ ಅಧಿವೇಶನ ಕರೆಯಲಾಗಿದ್ದು, ರಾತ್ರಿ 11 ಗಂಟೆಗೆ ಸಂಸತ್ನ ವಿಶೇಷ ಅಧಿವೇಶನ ಆರಂಭಗೊಳ್ಳಲಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಜಿಎಸ್ಟಿ ಕುರಿತು ಸಂಸತ್ ಭವನಕ್ಕೆ ವಿವರಣೆ ನೀಡಲಿದ್ದಾರೆ. ಬಳಿಕ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಸತ್ ಉದ್ದೇಶಿಸಿ ಮಾತನಾಡಲಿದ್ದು, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಸಹಿತ ಹಲವು ಗಣ್ಯರು ಉಪಸ್ಥಿತರಿರುತ್ತಾರೆ.
ಇನ್ನು ಇಂದಿನ ವಿಶೇಷ ಅಧಿವೇಶನಕ್ಕೆ ಉದ್ಯಮಿ ರತನ್ ಟಾಟಾ, ನಟ ಅಮಿತಾಭ್ ಬಚ್ಚನ್ ರಿಗೂ ಆಹ್ವಾನ ನೀಡಲಾಗಿದ್ದು, ಅಂತೆಯೇ ಜಿಎಸ್ಟಿಗೆ ಸಂಬಂಧಿಸಿದ ಕಿರುಚಿತ್ರವೊಂದು ಪ್ರದರ್ಶನಗೊಳ್ಳಲಿದೆ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ 11.00ಕ್ಕೆ ಜಿಎಸ್ಟಿ ಕುರಿತ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಸದನ ಉದ್ದೇಶಿಸಿ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ರಾತ್ರಿ 11.15ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್ ಟಿ ಕುರಿತಂತೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾತ್ರಿ 11.45ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾಷಣ ಮಾಡಲಿದ್ದು, ಬಳಿಕ ರಾತ್ರಿ 12.00 ಗಂಟೆಗೆ ಜಿಎಸ್ ಟಿಗೆ ಚಾಲನೆ ನೀಡಲಾಗುತ್ತಿದೆ. ಅಂತೆಯೇ ಹೊಸ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಕಿರುಚಿತ್ರವನ್ನು ಕೂಡ ಪ್ರದರ್ಶನ ಮಾಡಲಾಗುತ್ತದೆ.
ಮಧ್ಯರಾತ್ರಿಯೇ ಏಕೆ?
ಜಿಎಸ್ಟಿಗೆ ಚಾಲನೆ ನೀಡಲು ಮಧ್ಯರಾತ್ರಿಯಲ್ಲಿ ಅಧಿವೇಶನ ಕರೆದಿರುವ ಬಗ್ಗೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಜುಲೈ 1ರಿಂದ ದೇಶಾದ್ಯಂತ ನೂತನ ತೆರಿಗೆ ಪದ್ಧತಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತಾಂತ್ರಿಕವಾಗಿ ಜೂನ್ 30ರ ರಾತ್ರಿ 12 ಗಂಟೆ ಕಳೆದ ತಕ್ಷಣವೇ ಕ್ಯಾಲೆಂಡರ್ ದಿನಾಂಕ ಬದಲಾಗಿ ಜುಲೈ ಆರಂಭವಾಗಿಬಿಡುತ್ತದೆ. ಈ ಕಾರಣಕ್ಕಾಗಿ ಜೂನ್ 30ರ ರಾತ್ರಿ 12 ಗಂಟೆಗೆ ಜಿಎಸ್ಟಿಗೆ ಚಾಲನೆ ನೀಡಲು ಸರ್ಕಾರ ಮುಂದಾಗಿದೆ. ಇನ್ನು ಭಾರತದ ಸಂಸತ್ತು ಇದುವರೆಗೆ ಎರಡು ಸಂದರ್ಭದಲ್ಲಷ್ಟೆ ಮಧ್ಯರಾತ್ರಿ ಜಂಟಿ ಅಧಿವೇಶನ ನಡೆಸಿದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಜವಹರಲಾಲ್ ನೆಹರು ಅವರ ಪ್ರಸಿದ್ಧ ‘tryst with destiny’ ಭಾಷಣ ಸಂದರ್ಭದ 50ನೇ ವರ್ಷಾಚರಣೆ ನೆನಪಿಸುವುದಕ್ಕೆ 1997ರಲ್ಲಿ ಮೊದಲ ಬಾರಿ ಸಂಸತ್ತಿನ ಜಂಟಿ ಅಧಿವೇಶನ ಮಧ್ಯರಾತ್ರಿ ನಡೆದಿತ್ತು. ಈಗ ತೆರಿಗೆ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗುತ್ತಿರುವ ಐತಿಹಾಸಿಕ ಕ್ಷಣವೂ ವಿಶೇಷವಾದುದರಿಂದ ಮಧ್ಯರಾತ್ರಿ ಅಧಿವೇಶನ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.