ನವದೆಹಲಿ: ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡ ಬಿಎಸ್ IV ಏಪ್ರಿಲ್ 1ರಿಂದ ಜಾರಿಗೆ ಬರುವ ಹಿನ್ನೆಲೆಯಲ್ಲಿ ಮಾಲಿನ್ಯಕಾರಕ ಬಿಎಸ್ III ವಾಹನಗಳ ನೋಂದಣಿ ಮತ್ತು ಮಾರಾಟವನ್ನು ಸುಪ್ರೀಂಕೋರ್ಟ್ ನಿರ್ಬಂಧಿಸಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಾಣಿಜ್ಯ ಹಿತಾಸಕ್ತಿಗಿಂತ ಲಕ್ಷಾಂತಕ ಜನರ ಆರೋಗ್ಯದ ಹಿತಾಸಕ್ತಿ ಮುಖ್ಯ ಎಂದು ಹೇಳಿದೆ. ಅದೇ ವೇಳೆ ಮಾರ್ಚ್ 31ರ ಬಳಿಕ ಬಿಎಸ್ III (ಭಾರತ್ ಸ್ಟೇಜ್ III) ವಾಹನಗಳ ನೋಂದಣಿ ಮಾಡದಂತೆ ಸರ್ಕಾರಕ್ಕೆ ಆದೇಶಿಸಿದ ನ್ಯಾಯಾಲಯ ಈ ವಾಹನಗಳ ಮಾರಾಟವನ್ನು ನಿಷೇಧಿಸಿ ತೀರ್ಪು ನೀಡಿದೆ.
ವಾಹನ ತಯಾಕರು ತಮ್ಮ ವಾಹನಗಳನ್ನು ಬಿಎಸ್ IV ಮಾನದಂಡಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿಸಬೇಕು ಮತ್ತು ಇದನ್ನು ಸರ್ಕಾರ ಖಾತ್ರಿ ಪಡಿಸಬೇಕು ಎಂದು ಕೋರ್ಟ್ ಹೇಳಿದೆ.
ಸುಪ್ರೀಂಕೋರ್ಟ್‍ನ ಈ ತೀರ್ಪಿನಿಂದಾಗಿ ಮಾರಾಟಕ್ಕೆ ಸಿದ್ಧವಾಗಿರುವ ಸರಿಸುಮಾರು 8 ಲಕ್ಷ ಬಿಎಸ್ III ವಾಹನಗಳ ಮೇಲೆ ಹೊಡೆತ ಬೀಳಲಿದೆ.
ಏನಿದು ಭಾರತ್ ಸ್ಟೇಜ್ ?
ವಾಹನಗಳಲ್ಲಿನ ಮಾಲಿನ್ಯ ಮಟ್ಟವನ್ನು ಗುರುತಿಸುವ ವ್ಯವಸ್ಥೆ ಅಥವಾ ಮೋಟಾರು ವಾಹನಗಳ ವಾಯುಮಾಲಿನ್ಯ ಪರಿಮಿತಿ ಮಾನದಂಡವನ್ನು ಭಾರತ್ ಸ್ಟೇಜ್ ಎಂದು ಕರೆಯುತ್ತಾರೆ. ವಾಹನಗಳ ಎಂಜಿನ್ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಹೊರ ಸೂಸಬೇಕು ಎಂಬುದನ್ನು ಈ ಮೂಲಕ ನಿಗದಿಪಡಿಸಲಾಗುತ್ತದೆ.
ಈ ಪರಿಸರ ಮಾಲಿನ್ಯ ನಿಯಂತ್ರಣದ ಮಾನದಂಡಗಳನ್ನು ಅನುಸರಿಸಲು ವಾಹನಗಳ ಎಂಜಿನ್ ಗುಣಮಟ್ಟ ಅತ್ಯಾಧುನಿಕವಾಗಿದ್ದರೆ ಸಾಲದು, ಇಂಧನದ ಗುಣಮಟ್ಟವೂ ಹೆಚ್ಚಬೇಕಿತ್ತು.
ಈ ಮಾನದಂಡಗಳ ಜಾರಿ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳು, ವೆಚ್ಚ, ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಎರಡು ಸಮಿತಿಗಳನ್ನು ರಚಿಸಿತ್ತು. ಯೂರೋಪ್‌ನಲ್ಲಿ ಜಾರಿಯಲ್ಲಿರುವ ಮಾನದಂಡಗಳನ್ನು ಜಾರಿಗೆ ತರುವಂತೆ ಈ ಸಮಿತಿಗಳು ಶಿಫಾರಸು ಮಾಡಿತು. ಸರ್ಕಾರ ಅದನ್ನು ಒಪ್ಪಿಕೊಂಡು ಜಾರಿಗೆ ಮುಂದಾಗಿದೆ.