ನವದೆಹಲಿ: ಕೃಷಿ ಮತ್ತು ಕಟ್ಟಡ ನಿರ್ಮಾಣಕ್ಕಾಗಿ ಬಳಸುವ ಯಂತ್ರಗಳಿಗೆ ಭಾರತ್ ಸ್ಟೇಜ್-3(ಬಿಎಸ್-3) ವಾಹನಗಳ ಮಾರಾಟ ಮತ್ತು ದಾಖಲಾತಿ ನಿಷೇಧ ನಿಯಮ ಅನ್ವಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.
ಬಿಎಸ್ 4 ಹೊಗೆ ಹೊರಸೂಸುವಿಕೆ ಪ್ರಮಾಣ ಮಾನದಂಡಗಳನ್ನು ಅನುಸರಿಸದಿರುವ ವಾಹನಗಳನ್ನು ಮಾರ್ಚ್ 31ರ ನಂತರ ಮಾರಾಟ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಮಾರ್ಚ್ 29ರಂದು ಆದೇಶ ಹೊರಡಿಸಿತ್ತು.
ಬಿಎಸ್-3 ಮತ್ತು ಬಿಎಸ್-4 ನಿಯಮಗಳನ್ನು ಜಾರಿಗೆ ತಂದ ಮೇಲೆ ಅದಕ್ಕೂ ಮುನ್ನ ಉತ್ಪಾದನೆಗೊಂಡಿರುವ ಕೃಷಿ ಮತ್ತು ಕಟ್ಟಡ ನಿರ್ಮಾಣ ವಾಹನಗಳಿಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿತ್ತು.
ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಬಿಎಸ್-3 ವಾಹನಗಳನ್ನು ಬಿಎಸ್-4 ವಾಹನಗಳಾಗಿ ಪರಿವರ್ತಿಸುವುದು ಅಪ್ರಾಯೋಗಿಕವಾಗಿದೆ. ಈಗಾಗಲೇ ಬಿಎಸ್-3 ವಿಭಾಗದ ಸುಮಾರು 19 ಕೋಟಿ ವಾಹನಗಳು ಭಾರತದ ರಸ್ತೆಗಳಲ್ಲಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟದ ಬಗ್ಗೆ ನಿಗಾ ವಹಿಸುತ್ತಿರುವ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.