ಮಾಲ್ಡಾ: ಪಶ್ಚಿಮ ಬಂಗಾಳದ ಮಾಲ್ಡಾದ ಸಿಮಲ್ಟಾಲಾ ಬಳಿ ಗಂಗಾ ನದಿಯಲ್ಲಿ ಬೋಟ್ ವೊಂದು ತಲೆ ಕೆಳಗಾಗಿ ಮುಗುಚಿಬಿದ್ದ ಪರಿಣಾಮ ಮೂವರು ಮೃತಪಟ್ಟಿದ್ದು, ಮತ್ತೊರ್ವ ನಾಪತ್ತೆಯಾಗಿದ್ದಾರೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ 12 ಜನ ಪ್ರಯಾಣಿಸುತ್ತಿದ್ದ ಬೋಟ್ ತಲೆಕೆಳಗಾಗಿ ಬಿದ್ದಿದ್ದು, ಎಂಟು ಮಂದಿ ಈಜಿ ತಡ ಸೇರಿದ್ದಾರೆ. ಆದರೆ ನಾಲ್ವರು ನಾಪತ್ತೆಯಾಗಿದ್ದರು ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿ(ಬಿಡಿಒ) ದುಲಾಲ್ ಚಂದ್ರ ಸರ್ಕಾರ್ ಅವರು ತಿಳಿಸಿದ್ದಾರೆ.
ನಾಪತ್ತೆಯಾಗಿದ್ದ ನಾಲ್ವರ ಪೈಕಿ ಮೂವರ ಮೃತದೇಹ ಪತ್ತೆಯಾಗಿದ್ದು, ಅವರನ್ನು ರುಬೇಲ್, ಅಶ್ರಫ್ ಅಲಿ ಹಾಗೂ ತಹಿದೂರ್ ಎಂದು ಗುರುತಿಸಲಾಗಿದೆ. ಮತ್ತೊರ್ವ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಸರ್ಕಾರ್ ಹೇಳಿದ್ದಾರೆ.
ಮೃತಪಟ್ಟವರೆಲ್ಲರೂ ಲಖಿಪುರದ ಜಿಯಾರಾಟೊಲಾ ಗ್ರಾಮದ ನಿವಾಸಿಗಳಾಗಿದ್ದು, ಗೋಬಿಂದರಾಮಪುರದಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನಗೆ ಬರುವಾಗ ಈ ಅವಘಡ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.