ನೋಟು ನಿಷೇಧ ನಿರ್ಧಾರ ಖಂಡಿತವಾಗಿಯೂ ಗಾಂಧಿ ಕುಟುಂಬಕ್ಕೆ ದುರಂತ: ಸ್ಮೃತಿ ಇರಾನಿ
ಕೇಂದ್ರ ಆಡಳಿತಾರೂಢ ಎನ್'ಡಿಎ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರ ಖಂಡಿತವಾಗಿಯೂ ಗಾಂಧಿ ಕುಟುಂಬಕ್ಕೊಂದು ದುರಂತ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಗುರುವಾರ ಹೇಳಿದ್ದಾರೆ...
ಲಖನೌ: ಕೇಂದ್ರ ಆಡಳಿತಾರೂಢ ಎನ್'ಡಿಎ ಸರ್ಕಾರ ತೆಗೆದುಕೊಂಡ ನೋಟು ನಿಷೇಧ ನಿರ್ಧಾರ ಖಂಡಿತವಾಗಿಯೂ ಗಾಂಧಿ ಕುಟುಂಬಕ್ಕೊಂದು ದುರಂತ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಗುರುವಾರ ಹೇಳಿದ್ದಾರೆ.
ರೂ.500 ಹಾಗೂ 1,000 ಮುಖಬೆಲೆಯ ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿ ನಿನ್ನೆಗೆ ಒಂದು ವರ್ಷವಾಗಿದ್ದು, ನೋಟು ನಿಷೇಧ ವರ್ಷಾಚರಣೆಯನ್ನು ಕಾಂಗ್ರೆಸ್ ಪಕ್ಷ 'ಕರಾಳ ದಿನ'ವನ್ನಾಗಿ ಆಚರಿಸಿದೆ. ಅಲ್ಲದೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ನೋಟು ನಿಷೇಧವನ್ನು ಒಂದು ದುರಂತವೆಂದು ಕರೆದಿದ್ದರು.
ಈ ಹಿನ್ನಲೆಯಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ಸ್ಮೃತಿ ಇರಾನಿಯವರು, ನೇರವಾಗಿ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿ ಭ್ರಷ್ಟಾಚಾರದ ಸಮಾನಾರ್ಥವಾಗಿರುವ ಗಾಂಧಿ ಕುಟುಂಬಕ್ಕೆ ನೋಟು ನಿಷೇಧ ಖಂಡಿತವಾಗಿಯು ಒಂದು ದುರಂತ ಎಂದು ಕುಟುಕಿದ್ದಾರೆ.
ಕೇವಲ ತೋರಿಕೆಗಾಗಿ ರೂ.4 ಸಾವಿರ ವಿತ್ ಡ್ರಾ ಮಾಡಿದ ಜೆಂಟಲ್ ಮ್ಯಾನ್ ಹಾಗೂ ತಮ್ಮ ನಾಯಕತ್ವದಲ್ಲಿ ಕಾಂಗ್ರೆಸ್ ಮೇಲಿಂದ ಮೇಲೆ ಚುನಾವಣೆಯಲ್ಲಿ ಸೋಲುತ್ತಿರುವ ಮಿಸ್ಟರ್ ಗಾಂಧಿಗೆ ಇದೊಂದು ದುರಂತವೇ ಸರಿ ಎಂದು ಟೀಕಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೇಳಿಕೆ ನೀಡುತ್ತಿದ್ದ ಕಾಂಗ್ರೆಸ್, ಶೀಘ್ರದಲ್ಲಿಯೇ ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಅಧ್ಯಕ್ಷರಾಗುತ್ತಾರೆಂದು ಹೇಳುತ್ತಿತ್ತು. ಕಾಂಗ್ರೆಸ್ ಪಕ್ಷದ ಈ ಹೇಳಿಕೆ ಬೆನ್ನಲ್ಲೇಯ ಟಿವಿ ಚಾನೆಲ್ ಗಳು ಸಮೀಕ್ಷೆ ನಡೆಸಿದ್ದವು. ಕಾಂಗ್ರೆಸ್ ನ ಈ ನಿರ್ಧಾರ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಯಲ್ಲಿ ಸೋಲು ಕಾಣಲು ಕಾರಣವಾಗುತ್ತದೆ ಎಂದು ಹೇಳಿತ್ತು. ಬಳಿಕ ಕಾಂಗ್ರೆಸ್ ದನಿಯೇ ಬದಲಾಗತೊಡಗಿತು. ಮಿ. ಗಾಂಧಿಯವರು ಆಂತರಿಕವಾಗಿಯೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ದ ಆರೋಪ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.