ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯಕ್ಕೆ ಸಂಬಂಧಿಸಿದಂತೆ ದೆಹಲಿ ಆಡಳಿತರೂಢ ಆಮ್ ಆದ್ಮಿ ಪಕ್ಷ(ಎಎಪಿ) ಬುಧವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಯೋಜನೆಗಳನ್ನು ತಡೆಯುತ್ತಿದೆ ಎಂದು ಆರೋಪಿಸಿರುವ ಎಎಪಿ ಮುಖ್ಯ ವಕ್ತಾರ ಸೌರಭ್ ಭಾರದ್ವಜ್ ಅವರು, ದೆಹಲಿ ಸರ್ಕಾರ ಹಣಕಾಸಿನ ಕೊರತೆ ಎದುರಿಸುತ್ತಿದೆ ಎಂದು ಪಕ್ಷ ಯಾವತ್ತು ಹೇಳಿಲ್ಲ ಎಂದಿದ್ದಾರೆ.
ದೆಹಲಿ ಸರ್ಕಾರ ಸಾರ್ವಜನಿಕ ಅನುಕುಲಕ್ಕಾಗಿ ಹೆಚ್ಚಿನ ಬಸ್ ಗಳನ್ನು ಖರೀದಿಸಲು ಬಯಸಿದೆ. ಆದರೆ ಕೇಂದ್ರ ಸರ್ಕಾರ ಬಸ್ ಡಿಪೋಗಾಗಿ ಭೂಮಿ ನೀಡುತ್ತಿಲ್ಲ ಎಂದು ಎಎಪಿ ನಾಯಕ ದೂರಿದ್ದಾರೆ.
ಮಾಲಿನ್ಯ ನಿಯಂತ್ರಿಸುವುದಕ್ಕಾಗಿ ದೆಹಲಿ ಸರ್ಕಾರ ವೈಮಾನಿಕ ನೀರು ಚಿಮುಕಿಸುವುದಕ್ಕೆ ಕೇಂದ್ರ ಸರ್ಕಾರದ ಅನುಮತಿ ಕೇಳಿದೆ ಮತ್ತು ಅದಕ್ಕಾಗಿ ವೆಚ್ಚ ಮಾಡಲು ಸಿದ್ಧವಾಗಿದೆ. ಇನ್ನು ದೂಳು ನಿಯಂತ್ರಿಸುವುದಕ್ಕಾಗಿ ರಸ್ತೆಗಳಿಗೆ ನೀರು ಚಿಮುಕಿಸುವುದು ಸೇರಿದಂತೆ ಆಪ್ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಭಾರದ್ವಾಜ್ ಅವರು ಹೇಳಿದ್ದಾರೆ.