ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಉಗ್ರರು ಮತ್ತೆ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಸಬ್-ಇನ್ಸ್ ಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಸಂಜೆ ಕಾಶ್ಮೀರದ ಕುಲ್ಗಮ್ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಗಸ್ತು ತಂಡದ ಮೇಲೆ ಶಸ್ತ್ರ ಸಜ್ಜಿತ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಸಬ್-ಇನ್ಸ್ ಪೆಕ್ಟರ್ ಅನ್ವರ್ ಅಲಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಲ್ಗಮ್ ಜಿಲ್ಲೆಯ ಮಿರ್ ಬಜಾರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್ ಪಿಎಫ್ ಸಿಬ್ಬಂದಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಭದ್ರತಾ ಪಡೆಗಳು ಮಿರ್ ಬಜಾರ್ ಪ್ರದೇಶವನ್ನು ಸಂಪೂರ್ಣ ಸುತ್ತುವರೆದಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.