ರಾಯ್ ಪುರ: ಹೆಚ್ಚಿನ ಡೆಸಿಬಲ್ ಗಳ ಶಬ್ದವಿರುವ ಪಟಾಕಿಗಳಿಗೆ ಚತ್ತೀಸ್ ಗಢ ಸರ್ಕಾರ ನಿಷೇಧ ವಿಧಿಸಿದೆ.
ಪರಿಸರಕ್ಕೆ ಹಾನಿಯುಂಟುಮಾಡುವ, ವಾಯುಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದರೊಂದಿಗೆ ಪಟಾಕಿಯಿಂದ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಜನರಲ್ಲಿ ಜಾಗೃತಿ ಉಂಟುಮಾಡಲು ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚತ್ತೀಸ್ ಗಢ ಸರ್ಕಾರ ತಿಳಿಸಿದೆ.
ಚತ್ತೀಸ್ ಗಢ ಪರಿಸರ ಸಂರಕ್ಷಣೆ ಮಂಡಳಿಯ ಅಧ್ಯಕ್ಷ ಅಮನ್ ಕುಮಾರ್ ಸಿಂಗ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ವಿಭಾಗೀಯ ಆಯುಕ್ತರಿಗೆ ಹಾಗೂ ಸಂಬಂಧಪಟ್ಟ ಆಧಿಕಾರಿಗಳಿಗೆ ಸುತ್ತೋಲೆಯನ್ನು ತಲುಪಿಸಿ ಹೆಚ್ಚು ಡೆಸಿಬಲ್ ಶಬ್ದ ಹೊಂದಿರುವ ಪಟಾಕಿಗಳ ನಿಷೇಧ ಜಾರಿಯನ್ನು ಯಶಸ್ವಿಗೊಳಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪಟಾಕಿಗಳನ್ನು ಹೊಡೆಯುವುದಕ್ಕೂ ಸಹ ನಿಷೇಧ ವಿಧಿಸಲಾಗಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಪ್ರದೇಶಗಳಿರುವ 100 ಮೀಟರ್ ವ್ಯಾಪ್ತಿಯಲ್ಲಿ ಪಟಾಕಿ ಹೊಡೆಯುವುದನ್ನೂ ಸಹ ನಿಷೇಧಿಸಲಾಗಿದೆ.