ಚೆನ್ನೈ: ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರು ಅಧಿಕೃತವಾಗಿ ರಾಜಕೀಯ ಸೇರುವುದಾಗಿ ಹಾಗೂ ತಮ್ಮದೆ ರಾಜಕೀಯ ಪಕ್ಷ ಘೋಷಿಸುವುದಾಗಿ ಹೇಳಿದ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ನಟನನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಇಂದು ಮಧ್ಯಾಹ್ನ ಕಮಲ್ ಹಾಸನ್ ಅವರ ನಿವಾಸಕ್ಕೆ ತೆರಳಿದ ಅರವಿಂದ್ ಕೇಜ್ರಿವಾಲ್ ಅವರು, ರಾಜಕೀಯದ ಕುರಿತು ಚರ್ಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಳೆದ ತಿಂಗಳು ತಮ್ಮ ರಾಜಕೀಯ ಪ್ರವೇಶವನ್ನು ಖಚಿತಪಡಿಸಿದ್ದ ಹಿರಿಯ ನಟ ಕಮಲ್ ಹಾಸನ್ ಅವರು, ಈ ತಿಂಗಳ ಅಂತ್ಯಕ್ಕೆ ಹೊಸ ಪಕ್ಷ ಘೋಷಿಸುವುದಾಗಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಕಮಲ್ ಹಾಸನ್ ಅವರು ಕಳೆದ ಕೆಲವು ತಿಂಗಳಿಂದ ತಮಿಳುನಾಡು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದರು.