

ಮುಂಬೈ : ಇಲ್ಲಿನ ಬೈಕುಲಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇಂದ್ರಾಣಿ ಮುಖರ್ಜಿ ಹೇಗೆ ಅನಾರೋಗ್ಯಕ್ಕೆ ತುತ್ತಾದರು ಎಂಬ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದೆ.
ಘಟನೆ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಕಾರಾಗೃಹ ಪೊಲೀಸ್ ನಿರೀಕ್ಷಕ ರಾಜವರ್ಧನ್ ಅವರಿಗೆ ಆದೇಶಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭೂಷಣ್ ಉಪಾಧ್ಯಾಯ ಯುಎನ್ ಐ ಸುದ್ದಿಸಂಸ್ಥೆಗೆ ಸ್ರಷ್ಪಪಡಿಸಿದ್ದಾರೆ.
ತನಿಖಾ ಆದೇಶದ ಪ್ರತಿಯನ್ನು ಈಗಷ್ಟೇ ಸ್ವೀಕರಿಸಲಾಗಿದೆ. ಔಪಚಾರಿಕ ಸಂಪರ್ಕ ದೊರೆತ ನಂತರ ತನಿಖೆ ಆರಂಭಿಸಲಾಗುವುದು ಎಂದು ರಾಜವರ್ಧನ್ ತಿಳಿಸಿದ್ದಾರೆ.
ಆದಾಗ್ಯೂ, ಪ್ರಾಥಮಿಕ ತನಿಖಾ ವರದಿ ಸಿದ್ಧವಾಗಿದೆ. ಇಂದ್ರಾಣಿ ಆರೋಗ್ಯ ಕುರಿತ ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ನಂತರ ಮಾಹಿತಿ ಸಂಗ್ರಹ ಕಾರ್ಯ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಶೀರಾ ಬೋರಾ ಹತ್ಯೆ ಪ್ರಕರಣದಲ್ಲಿ ಇಂದ್ರಾಣಿ ಮುಖರ್ಜಿ ಆರೋಪಿಯಾಗಿದ್ದಾರೆ. ಉಸಿರಾಟದ ತೊಂದರೆಯಿಂದಾಗಿ ಕಳೆದ ಶುಕ್ರವಾರ ರಾತ್ರಿಯಿಂದಲೂ ಜೆಜೆ ಆಸ್ಪತ್ರೆಯಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.