ನಾಗ್ಪುರ: ಯಾವುದೇ ರೀತಿಯ ಸಾಲ ಪಡೆದಯ ಮಹಾರಾಷ್ಟ್ರದ ಕೆಲವು ರೈತರಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವೊಂದು 40 ರಿಂದ 50 ಲಕ್ಷ ರುಪಾಯಿ ಮರು ಪಾವತಿ ಮಾಡುವಂತೆ ನೋಟಿಸ್ ನೀಡಿದೆ.
ನೋಟಿಸ್ ಪಡೆದ ನರ್ಖೇಡ್ ತಾಲೂಕಿನ ಸಿಂಝಾರ್ ಗ್ರಾಮದ ರೈತರ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಗ್ಪುರ್ ಗ್ರಾಮೀಣ ಠಾಣೆಯ ಕ್ರೈಂ ಬ್ರಾಂಚ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸರ ಪ್ರಕಾರ, ಬ್ಯಾಂಕ್ ನೋಟಿಸ್ ಗೆ ಸಂಬಂಧಿಸಿದಂತೆ 11 ರೈತರು ದೂರು ನೀಡಿದ್ದು, ತಲಾ 40 ರಿಂದ 50 ಲಕ್ಷ ರುಪಾಯಿ ಸಾಲ ಮರು ಪಾವತಿ ಮಾಡುವಂತೆ ಸೂಚಿಸಲಾಗಿದೆ. ಆದರೆ ನಾವು ಆ ಬ್ಯಾಂಕ್ ನಿಂದ ಯಾವುದೇ ಸಾಲ ಪಡೆದಿಲ್ಲ ಎಂದು ರೈತರು ಹೇಳಿದ್ದಾರೆ.
50 ಲಕ್ಷ ರುಪಾಯಿ ಸಾಲದ ಕಂತುಗಳನ್ನು ಪಾವತಿಸುವಂತೆ 10 ದಿನಗಳ ಹಿಂದೆ ನನಗೆ ನೋಟಿಸ್ ಬಂದಿದೆ. ಆದರೆ ಆ ಬ್ಯಾಂಕ್ ನಿಂದ ನಾನು ಯಾವುದೇ ರೀತಿಯ ಸಾಲ ಪಡೆದಿಲ್ಲ. ಆದರೆ ಸರ್ಕಾರಿ ಯೋಜನೆಯ ಲಾಭ ಕೊಡಿಸುವ ಉದ್ದೇಶದಿಂದ ನಮ್ಮಿಂದ ದಾಖಲೆ ಪಡೆದ ಯಾರೋ ದುಷ್ಕರ್ಮಿಗಳು ನಮ್ಮ ಹೆಸರಿನಲ್ಲಿ ಸಾಲ ಪಡೆದಿರುವ ಸಾಧ್ಯತೆ ಇದೆ ಎಂದು ದೂರುದಾರರ ಪೈಕಿ ಒಬ್ಬರಾದ ಪ್ರಕಾಶ್ ಗಾಯಕವಾಡ್ ಅವರು ಪಿಟಿಐಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ನಮಗೆ 11 ಜನ ರೈತರು ದೂರು ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ವರ್ಗಾಯಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಜಿ ಆರ್ ತಮ್ಟೆ ಅವರು ಹೇಳಿದ್ದಾರೆ.