ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಗೆ ಭೇಟಿ ನೀಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ.
ಆದರೆ ವಾಜಪೇಯಿ ಅವರ ಆರೋಗ್ಯದ ಕುರಿತಂತೆ ಆಸ್ಪತ್ರೆಯು ಇದುವರೆಗೆ ಯಾವ ಅಧಿಕೃತ ಹೇಳಿಕೆ ನೀಡಿಲ್ಲ.
ಮೋದಿ ಏಮ್ಸ್ ಭೇಟಿಗೆ ಮುನ್ನ ಕೇಂದ್ರ ಟೆಕ್ಸ್ ಟೈಲ್ಸ್ ಸಚಿವೆ ಸ್ಮೃತಿ ಇರಾನಿ ಕೂಡ ಏಮ್ಸ್ ಗೆ ಭೇಟಿ ಕೊಟ್ಟಿದ್ದಾರೆ.
ಮೂತ್ರಪಿಂಡದ ಸೋಂಕು, ಎದೆ ನೋವು, ಮೂತ್ರದ ಸೋಂಕು ಇದರಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ವಾಜಪೇಯಿ ಜೂನ್ 11 ರಂದು ಏಮ್ಸ್ ಗೆ ದಾಖಲಾಗಿದ್ದಾರೆ.
93 ವರ್ಷ ವಯಸ್ಸಿನ ಬಿಜೆಪಿ ಮುಖಂಡ ವಾಜಪೇಯಿ ಮಧುಮೇಹದಿಂದ ಬಳಲುತ್ತಿದ್ದಾರೆ. 2009 ರಲ್ಲಿ ಪಾರ್ಶ್ವವಾಯು ಹೊಡೆತಕ್ಕೆ ಒಳಗಾಗಿದ್ದ ವಾಜಪೇಯಿ ಅಲ್ಲಿಂದೀಚೆಗೆ ನೆನಪಿನ ಶಕ್ತಿಯ ಕೊರತೆಯನ್ನು ಅನುಭವಿಸುತ್ತಿದ್ದಾರೆ.