ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರ ವಿರುದ್ಧ ಭಾರತೀಯ ಸೇನಾಪಡೆ ಭಾರೀ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸೋಮವಾರ ತಿಳಿದುಬಂದಿದೆ.
ಕುಪ್ವಾರ ಜಿಲ್ಲೆಯ ಕರಲ್ಗುಂಡ್ ಎಂಬ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರ ವಿರುದ್ಧ ಸಿಆರ್'ಪಿಎಫ್'ನ 92 ಬೆಟಾಲಿಯನ್ ಪಡೆ, 32 ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.
ಇದರಂತೆ ಬಂಡಿಪೋರಾ ಜಿಲ್ಲೆಯ ಹಜಿನ್ ಎಂಬ ಪ್ರದೇಶದಲ್ಲಿಯೂ ಕೂಡ ಉಗ್ರರು ದಾಳಿ ನಡೆಸಿದ್ದು, ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಏಕಕಾಲದಲ್ಲಿ ಎರಡು ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ಪ್ರಸ್ತುತ ಉಗ್ರರು ಅಡಗಿ ಕುಳಿತಿರುವ ಸ್ಥಳವನ್ನು ಸುತ್ತವರೆದಿರುವ ಭದ್ರತಾ ಪಡೆಗಳು ಎನ್'ಕೌಂಟರ್ ನಡೆಸಲು ಆರಂಭಿಸಿವೆ. ಕಾರ್ಯಾಚರಣೆ ವೇಳೆ ಈ ವರೆಗೂ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.