ಬಹುಭಾಷಾ ನಟಿ ಸನುಶಾಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಮಲಯಾಳಂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ನಟಿ ಸನುಶಾಗೆ ಚಲಿಸುತ್ತಿರುವ ರೈಲಿನಲ್ಲಿ ಲೈಂಗಿಕ ಕಿರುಕುಳ ...
ನಟಿ ಸನುಶಾ(ಸಂಗ್ರಹ ಚಿತ್ರ)
ನಟಿ ಸನುಶಾ(ಸಂಗ್ರಹ ಚಿತ್ರ)
Updated on: 
ತ್ರಿಶೂರ್: ಮಲಯಾಳಂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ನಟಿ ಸನುಶಾಗೆ ಚಲಿಸುತ್ತಿರುವ ರೈಲಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿನ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಆಂಟೊ ಬೋಸ್ ಎಂದು ಗುರುತಿಸಲಾಗಿದ್ದು ಈತ ಕನ್ಯಾಕುಮಾರಿ ನಿವಾಸಿ ಅರುಲಪ್ಪಮ್ ಅವರ ಪುತ್ರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ತ್ರಿಶೂರು ರೈಲ್ವೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿ ಇದೀಗ ಪೊಲೀಸ್ ವಶದಲ್ಲಿದ್ದಾನೆ ಎಂದು ಹೇಳಿರುವ ಪೊಲೀಸರು ವ್ಯಕ್ತಿಯ ಗುರುತು ಹೇಳಲು ನಿರಾಕರಿಸಿದ್ದಾರೆ.
ಮೊನ್ನೆ ಬುಧವಾರ ಮಧ್ಯರಾತ್ರಿ ಸುಮಾರು 1 ಗಂಟೆ ಹೊತ್ತಿಗೆ ಮಂಗಳೂರು-ತಿರುವನಂತಪುರಂ ಮಾವೆಲಿ ಎಕ್ಸ್ ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಈ ಘಟನೆ ಸಂಭವಿಸಿತ್ತು. ರೈಲು ವಲ್ಲತೊಲ್ ನಗರ ನಿಲ್ದಾಣಕ್ಕೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಆರೋಪಿ ಮಲಯಾಳಂನ ಉದಯೋನ್ಮುಖ ನಟಿ ಸನುಶಾಗೆ ಕಿರುಕುಳ ನೀಡಿದ್ದಾನೆ. 
ಭೀತಿಗೊಳಗಾದ ಸನುಶಾ ರೈಲ್ವೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದರು. ಪೊಲೀಸರು ತ್ರಿಶೂರು ಠಾಣೆಯಲ್ಲಿ ಆರೋಪಿಯನ್ನು ಬಂಧಿಸಿದರು. ಆರೋಪಿ ವಿರುದ್ಧ ಕೇಸು ದಾಖಲಿಸಲಾಗಿದ್ದು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.
ಈ ಬಗ್ಗೆ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ಸನುಶಾ, ರೈಲ್ವೆ ಬೋಗಿಯ ಸೀಟಿನಲ್ಲಿ ಮಲಗಿಕೊಂಡಿರುವಾಗ ಯಾರೋ ಅವರ ತುಟಿ ಮುಟ್ಟಿದಂತೆ ಭಾಸವಾಯಿತಂತೆ. ತಕ್ಷಣವೇ ನಟಿ ಆರೋಪಿಯ ಕೈ ಹಿಡಿದು ಎದ್ದು ನಿಂತು ವಿದ್ಯುದೀಪವನ್ನು ಉರಿಸಿದರಂತೆ. ರೈಲಿನಲ್ಲಿದ್ದ ಇಬ್ಬರು ಸಹ ಪ್ರಯಾಣಿಕರು ಹೊರತುಪಡಿಸಿ ಬೇರೆ ಯಾರೂ ಸನುಶಾ ಸಹಾಯಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಅವರು ಬಂದ ನಂತರವೇ ರೈಲು ಇಳಿದು ಹೋದೆನು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಇಂತಹ ದುರ್ವರ್ತನೆ ಮತ್ತು ದುರ್ಘಟನೆ ನಡೆದರೆ ಜನರು ಸಾಮಾಜಿಕ ತಾಣಗಳಲ್ಲಿ ಮಾತ್ರ ಪ್ರತಿಕ್ರಿಯೆ ನೀಡುತ್ತಾರೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಾಗಲಿ, ಸಹಾಯಕ್ಕೆ ಬರುವುದಾಗಲಿ ಮಾಡುವುದಿಲ್ಲ ಎನ್ನುತ್ತಾರೆ ಸನುಶಾ.
ಇಂದು ನಾನು ಕಾನೂನು ಪ್ರಕಾರ ಹೋರಾಟ ನಡೆಸಬೇಕಾಗಿದೆ. ನನಗೆ ನನ್ನ ಕುಟುಂಬದವರ ಪ್ರೋತ್ಸಾಹವಿದೆ. ಇಂತಹ ಲೈಂಗಿಕ ಕಿರುಕುಳಗಳನ್ನು ಎದುರಿಸಿದರೆ ಯುವತಿಯರು ಮತ್ತು ಮಹಿಳೆಯರು ಯಾವುದೇ ಹಿಂಜರಿಕೆ ಮತ್ತು ವಿಳಂಬ ಮಾಡದೆ ತಕ್ಷಣವೇ ದೂರು ನೀಡಬೇಕು ಎನ್ನುತ್ತಾರೆ ಸನುಶಾ.
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಸನುಶಾ 2004ರಲ್ಲಿ ಮಮ್ಮುಟ್ಟಿ ಅಭಿನಯದ ಕಚ್ಚಾ ಚಿತ್ರದಲ್ಲಿ ಅತ್ಯುತ್ತಮ ಬಾಲನಟಿ ರಾಜ್ಯ ಪ್ರಶಸ್ತಿಯನ್ನು ಗಳಿಸಿದ್ದರು. ದಕ್ಷಿಣ ಭಾರತ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿ ಸನುಶಾ ಇದುವರೆಗೆ 40ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಮತ್ತು ಅನೇಕ ಟಿವಿ ಧಾರವಾಹಿಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com