

ನವದೆಹಲಿ: ಕೇಂದ್ರ ಸರ್ಕಾರದ 2018-19ರ ಬಜೆಟ್ ನಲ್ಲಿ ಮೆಟ್ರೋ ರೈಲು ಯೋಜನೆಗಳಿಗಾಗಿ 14, 264.60 ಕೋಟಿ ಮೀಸಲಿಡಲಾಗಿದ್ದು, ಶೇ. 20 ರಷ್ಟು ಕಡಿಮೆ ಮಾಡಲಾಗಿದೆ ಎಂಬಂತಹ ಅಭಿಪ್ರಾಯ ವ್ಯಕ್ತವಾಗಿದೆ.
ನಿನ್ನೆ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ ಆರ್ಥಿಕ ಹಾಗೂ ನಗರೀಕರಣದಲ್ಲಿ ಮೂಲಸೌಕರ್ಯ ಬೆಳವಣಿಗೆಯ ಚಾಲಕ ಎಂದು ಬಣ್ಣಿಸಿದ್ದರು. ತಮ್ಮ ಸರ್ಕಾರ ಅವಕಾಶ ಹಾಗೂ ಆದ್ಯತಾ ಸರ್ಕಾರವಾಗಿದೆ ಎಂದು ಹೇಳಿದ್ದರು. ಆದಾಗ್ಯೂ. ದೆಹಲಿ ಮೆಟ್ರೋ ರೈಲು ವಿಸ್ತರಣೆ ಸೇರಿದಂತೆ ಮತ್ತಿತರ ಕಾರ್ಯಗಳಿಗೆ ಆದ್ಯತೆ ನೀಡಿಲ್ಲ ಎಂಬಂತಹ ಮಾತುಗಳು ಕೇಳಿಬರುತ್ತಿವೆ.
ದೆಹಲಿ ಮೆಟ್ರೋ ರೈಲು ವಿಸ್ತರಣೆಗಾಗಿ ಬಜೆಟ್ ನಲ್ಲಿ 50 ಕೋಟಿ ರೂ. ಪ್ರಸ್ತಾಪಿಸಲಾಗಿದೆ. ಆದರೆ, 2017-18ರ ಅವಧಿಯಲ್ಲಿ ಈ ಯೋಜನೆಗಾಗಿ 17 ಸಾವಿರದ 810 ಕೋಟಿ ಮೀಸಲಿಡಲಾಗಿತ್ತು. ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಮೂರನೇ ಹಂತದ ಮೆಟ್ರೋ ರೈಲು ಮಾರ್ಗ ವಿಸ್ತರಣೆಗಾಗಿ ದೆಹಲಿ ಮೆಟ್ರೋ ರೈಲು ನಿಗಮ 44. 816.91 ಕೋಟಿ ರೂಗೆ ಪ್ರಸ್ತಾಪ ಸಲ್ಲಿಸಿತ್ತು.