ರಾಂಚಿ: ಬಹುಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಕಡೆಯ ವ್ಯಕ್ತಿಯೊಬ್ಬರಿಂದ ತಮಗೆ ಫೋನ್ ಕರೆ ಬಂದಿತ್ತು ಎಂದು ಎರಡನೇ ಬಾರಿ ಅಪರಾಧಿಗಳ ಶಿಕ್ಷೆ ಪ್ರಮಾಣದ ತೀರ್ಪನ್ನು ಮುಂದೂಡಿದ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶರು ಹೇಳಿದ್ದಾರೆ.
ಇಂದು ಎರಡನೇ ಬಾರಿ ತೀರ್ಪನ್ನು ಮುಂದೂಡಿದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು, ಲಾಲು ಪ್ರಸಾದ್ ಯಾದವ್ ಕಡೆಯ ವ್ಯಕ್ತಿಯಿಂದ ತಮಗೆ ಫೋನ್ ಕರೆ ಬಂದಿದೆ ಎಂದು ಹೇಳಿದ್ದಾರೆ. ಆದರೆ ಕರೆ ಮಾಡಿದ ವ್ಯಕ್ತಿ ಏನು ಹೇಳಿದ ಎಂಬುದುರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
'ನಿಮ್ಮ ಕಡೆಯವರಿಂದ ನನಗೆ ಹಲವು ಕರೆ ಬಂದಿವೆ. ಆದರೆ, ಈ ಬಗ್ಗೆ ಚಿಂತೆ ಬೇಡ. ನಾನು ಕಾನೂನನ್ನು ಮಾತ್ರ ಪಾಲಿಸುತ್ತೇನೆ' ಎಂದು ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಲಾಲು ಅವರಿಗೆ ಹೇಳಿರುವುದಾಗಿ ಎನ್ಎನ್ಐ ವರದಿ ಮಾಡಿದೆ.
ಮೇವು ಹಗರಣಕ್ಕೆ ಸಂಬಂಧಿಸಿದ ಆರು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಸೇರಿ 15 ಆರೋಪಿಗಳು ದೋಷಿ ಎಂದು ರಾಂಚಿ ಸಿಬಿಐ ವಿಶೇಷ ಕೋರ್ಟ್ ಕಳೆದ ಡಿಸೆಂಬರ್ 23ರಂದು ತೀರ್ಪು ನೀಡಿತ್ತು. ಅಲ್ಲದೆ ಶಿಕ್ಷೆಯ ಪ್ರಮಾಣವನ್ನು ಜನವರಿ 3ಕ್ಕೆ ಕಾಯ್ದಿರಿಸಿತ್ತು. ಆದರೆ ಇಂದು ಎರಡನೇ ಬಾರಿ ತೀರ್ಪನ್ನು ಮುಂದೂಡಿದ್ದಾರೆ.