ನವದೆಹಲಿ: ಆಮ್ ಆದ್ಮಿ ಪಕ್ಷದ ಉಚ್ಛಾಟಿತ ನಾಯಕ ಕಪಿಲ್ ಮಿಶ್ರಾ ಅವರಿಗೆ ದೆಹಲಿ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
ದೆಹಲಿ ನಗರಾಭಿವೃದ್ಧಿ ಸಚಿವ ಸತ್ಯೇಂದರ್ ಜೈನ್ ಅವರು ಕಪಿಲ್ ಮಿಶ್ರಾ ಹಾಗೂ ಬಿಜೆಪಿ ಶಾಸಕ ಮಂಜೀಂದರ್ ಸಿಂಗ್ ಸಿರ್ಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಕಪಿಲ್ ಮಿಶ್ರಾ ಹಾಗೂ ಸಿರ್ಸಾ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಇದರಂತೆ ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯ, ಕಪಿಲ್ ಮಿಶ್ರಾ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ರೂ.10,000 ವೈಯಕ್ತಿಕ ಬಾಂಡ್ ನೀಡುವಂತೆ ಸೂಚನೆ ನೀಡಿದೆ.
ಪ್ರಕರಣ ಸಂಬಂಧ ಬಿಜೆಪಿ ಶಾಸಕ ಮಂಜೀಂದರ್ ಸಿಂಗ್ ಸಿರ್ಸಾ ಅವರಿಗೂ ನ್ಯಾಯಾಲಯ ಈ ಹಿಂದೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಮಂಜೀಂದರ್ ಅವರು ಇಂದು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಮಾರ್ಚ್.31ಕ್ಕೆ ಮುಂದೂಡಿದೆ.