ಶಾಸಕರ ವಿರುದ್ಧ ಪ್ರಕರಣ ಹಿಂಪಡೆಯಲು ಮುಂದಾದ ಕೇರಳ ಸರ್ಕಾರ, ವ್ಯಾಪಕ ಪ್ರತಿಭಟನೆ

ಕೇರಳದ ಆರು ಮಂದಿ ಸಿಪಿಐಎಂ ಶಾಸಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವ ಕೇರಳ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ (ಸಂಗ್ರಹ ಚಿತ್ರ)
ಕೇರಳ ಸಿಎಂ ಪಿಣರಾಯಿ ವಿಜಯನ್ (ಸಂಗ್ರಹ ಚಿತ್ರ)
Updated on: 
ತಿರುವನಂತಪುರಂ: ಕೇರಳದ ಆರು ಮಂದಿ ಸಿಪಿಐಎಂ ಶಾಸಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಹಿಂಪಡೆಯುವ ಕೇರಳ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ನಿರ್ಧಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2015 ಮಾರ್ಚ್ 13ರಂದು ಅಂದಿನ ವಿತ್ತ ಸಚಿವ ಕೆಎಂ ಮಣಿ ಅವರು  ಬಜೆಟ್ ಮಂಡನೆ ವೇಳೆ ಶಾಸನಸಭೆಯಲ್ಲೇ ಸಿಪಿಐಎಂನ ಕೆಲ ಶಾಸಕರು ಗದ್ದಲವೇರ್ಪಡಿಸಿದ್ದರು. ಸಚಿವರು ಬಾರ್ ಮಾಲೀಕರಿಂದ ಲಂಚ ಪಡೆದು ಅವರಿಗೆ ಅನುಕೂಲವಾಗುವಂತೆ ಬಜೆಟ್ ಸಿದ್ದಪಡಿಸಿದ್ದಾರೆ ಎಂದು ಆರೋಪಿಸಿ  ಶಾಸನ ಸಭೆಯ ಮೈಕ್ ಗಳನ್ನು ಕಿತ್ತೆಸೆದು ಪೀಠೋಪಕರಣ ಧ್ವಂಸಗೊಳಿಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ಸ್ಪೀಕರ್ ಸಕ್ತನ್ ಅವರು ಸಿಪಿಐಎಂನ ಆರು ಮಂದಿ ಶಾಸಕರ ವಿರುದ್ಧ ತನಿಖೆ ನಡೆಸುವಂತೆ ಅಪರಾಧ ವಿಭಾಗದ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ  ಪೊಲೀಸರು ಶಾಸಕರ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿದ್ದರು. ಅದರಂತೆ ಹಾಲಿ ಶಾಸಕರಾಗಿರುವ ಕೆ.ಟಿ. ಜಲೀಲ್, ಇ.ಪಿ ಜಯರಾಜನ್ ಸೇರಿದಂತೆ 6 ಮಂದಿ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.  ಇತ್ತೀಚೆಗಷ್ಟೇ ಮಾಜಿ ಶಾಸಕ ವಿ. ಶಿವಂಕುಟ್ಟಿ ಅವರು ತಮ್ಮ ವಿರುದ್ಧದ ವಿಚಾರಣೆಯನ್ನು ಹಿಂತೆಗೆದುಕೊಳ್ಳುವಂತೆ ಸಿಎಂ ಪಿಣರಾಯಿ ವಿಜಯನ್ ಬಳಿ ಮನವಿ ಮಾಡಿಕೊಂಡಿದ್ದರು. ಅಲ್ಲದೆ ಒಂದು ಪ್ರಕರಣಕ್ಕೆ ಎರಡೆರಡು ಬಾರಿ ಶಿಕ್ಷೆ  ವಿಧಿಸಲು ಹೇಗೆ ಸಾಧ್ಯ ಎಂದು ಕೇಳಿದ್ದರು. 
ಇದರ ಬೆನ್ನಲ್ಲೇ ಸಿಎಂ ವಿಜಯನ್ ಅವರು ಶಾಸಕರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಲು ಮುಂದಾಗಿದ್ದು, ಸರ್ಕಾರದ ಈ ನಿರ್ಧಾರ ಕೇರಳದಲ್ಲಿ ಮತ್ತೆ ರಾಜಕೀಯ ಗದ್ದಲಕ್ಕೆ ದಾರಿ ಮಾಡಿಕೊಟ್ಟಿದೆ. ಈ ಬಗ್ಗೆ  ಮಾತನಾಡಿರುವ ವಿಪಕ್ಷ ನಾಯಕ ಹಾಗೂ ಮಾಜಿ ಶಾಸಕ ಕೆಸಿ ಜೋಸೆಫ್ ಅವರು ಸರ್ಕಾರ ತನ್ನ ನಿರ್ಧಾರದಿಂದ ಸರಿಯುವವರೆಗೂ ತಾವು ಪ್ರತಿಭಟನೆ ಹಿಂಪಡೆಯುವುದಿಲ್ಲ..ಸರ್ಕಾರ ಹಠಮಾರಿತನ ಮುಂದುವರೆಸಿದರೆ ನಾವು  ಯಾವುದೇ ಹಂತಕ್ಕೂ ಹೋಗಲು ಸಿದ್ಧ ಎಂದ ಎಚ್ಚರಿಕೆ ನೀಡಿದ್ದಾರೆ.
ನಾಳೆಯಿಂದ ಕೇರಳ ಶಾಸನಸಭೆ ಆರಂಭವಾಗಲಿದ್ದು, ಸರ್ಕಾರದ ನಿರ್ಧಾರವನ್ನು ವಿಪಕ್ಷಗಳು ಸದನದಲ್ಲಿ ಪ್ರಶ್ನಿಸಿ ಗದ್ದಲವೆಬ್ಬಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com