

ನವದೆಹಲಿ: ಶೋಧನಾ ತಂಡವನ್ನು ರಚಿಸಲು ಇದೇ ತಿಂಗಳ 19ರಂದು ಲೋಕಪಾಲ್ ಆಯ್ಕೆ ಸಮಿತಿ ಸಭೆ ಕರೆಯಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ರಂಜನ್ ಗೊಗೊಯ್ ಅವರ ನೇತೃತ್ವದ ನ್ಯಾಯಪೀಠಕ್ಕೆ, ಲೋಕಪಾಲ್ ನೇಮಕಕ್ಕೆ ತಂಡದ ಹೆಸರುಗಳನ್ನು ಶೋಧ ಸಮಿತಿ ಶಿಫಾರಸು ಮಾಡಬೇಕಾಗಿದೆ ಎಂದು ಸರ್ಕಾರ ತಿಳಿಸಿದೆ.
ಮುಂದಿನ ವಿಚಾರಣೆಯನ್ನು ಜುಲೈ 24ಕ್ಕೆ ನಿಗದಿಪಡಿಸಿದ ನ್ಯಾಯಪೀಠ, ಜುಲೈ 19ರಂದು ಆಯ್ಕೆ ಸಮಿತಿಯ ಸಭೆ ನಡೆಯಲಿರುವುದರಿಂದ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಸಮಿತಿಯಲ್ಲಿ ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು, ಲೋಕಸಭಾಧ್ಯಕ್ಷರು, ವಿರೋಧ ಪಕ್ಷದ ಅಧ್ಯಕ್ಷರು ಮತ್ತು ಪ್ರಮುಖ ನ್ಯಾಯವಾದಿಗಳು ಇರುತ್ತಾರೆ.
ಕಳೆದ ವರ್ಷ ಏಪ್ರಿಲ್ 27ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಕೂಡ ಲೋಕಪಾಲ್ ರನ್ನು ನೇಮಕ ಮಾಡದಿರುವ ಸಂಬಂಧ ಕಾಮನ್ ಕಾಸ್ ಎಂಬ ಸರ್ಕಾರೇತರ ಸಂಘಟನೆ ಪರ ನ್ಯಾಯವಾದಿ ಶಾಂತಿ ಭೂಷಣ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ನ್ಯಾಯಪೀಠ ವಿಚಾರಣೆ ನಡೆಸಿತ್ತು.