

ತಮಿಳುನಾಡು : ರಸ್ತೆ ನಿರ್ಮಾಣದ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿದ ತಮಿಳುನಾಡು ಆದಾಯ ತೆರಿಗೆ ಇಲಾಖೆ , ಈವರೆಗೂ ನಡೆಸಿದ ದಾಳಿಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ 163 ಕೋಟಿ ನಗದು, ಹಾಗೂ 100 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಸರ್ಕಾರದಿಂದ ಹೆದ್ದಾರಿ ಹಾಗೂ ರಸ್ತೆ ನಿರ್ಮಾಣದ ಗುತ್ತಿಗೆ ಪಡೆಯುತ್ತಿದ್ದ ಎಸ್ ಪಿಕೆ ಮತ್ತು ಕಂಪನಿ , ಪಾಲುದಾರ ಸಂಸ್ಥೆಗಳ ಆವರಣದಲ್ಲಿ ನಿನ್ನೆಯಿಂದ ಶೋಧ ಕಾರ್ಯಾಚಾರಣೆ ನಡೆಸಲಾಗುತ್ತಿದೆ.
ದಾಳಿ ಇಂದು ಕೂಡಾ ಮುಂದುವರೆದಿದ್ದು, ಲೆಕ್ಕ ನೀಡಿದ 163 ಕೋಟಿ ನಗದು ಹಾಗೂ 100 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ದೇಶದ ಯಾವುದೇ ಕಡೆ ನಡೆಸಿದ ದಾಳಿಗಳಲ್ಲಿ ಇಷ್ಟೊಂದು ಮೊತ್ತದ ಹಣ ಹಾಗೂ ಚಿನ್ನಾಭರಣವನ್ನು ವಶಪಡಿಸಿಕೊಂಡಿರಲಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2016ರಲ್ಲಿ ನೋಟು ಅಮಾನ್ಯಗೊಂಡ ಸಂದರ್ಭದಲ್ಲಿ ಚೆನ್ನೈನಲ್ಲಿ ಗಣಿಗಾರಿಕೆ ಬ್ಯಾರೊನ್ ವೊಂದರ ಮೇಲೆ ನಡೆದ ದಾಳಿ ವೇಳೆಯಲ್ಲಿ 110 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿತ್ತು. ಚೆನ್ನೈ ವಿಚಾರಣಾ ವಿಭಾಗದ ಐಟಿ ಇಲಾಖೆಯಿಂದ ಈ ದಾಳಿ ನಡೆಸಲಾಗಿದೆ.
ದಾಳಿ ವೇಳೆಯಲ್ಲಿ ರಸ್ತೆ ನಿರ್ಮಾಣ ಸಂಸ್ಥೆ ಹಾಗೂ ಅವರ ಪಾಲುದಾರಿಕೆಯ ಸಂಸ್ಥೆಗಳು ತೆರಿಗೆಯಿಂದ ತಪ್ಪಿಸಿಕೊಂಡಿರುವ ಬಗ್ಗೆ ಸಾಕ್ಷ್ಯಧಾರಗಳನ್ನು ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಇವರೊಂದಿಗೆ ರಾಜಕೀಯ ನಂಟು ಇರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.