ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಳಿಕ ಅವರನ್ನು ಆಲಿಂಗಿಸಿ, ಕಣ್ಣು ಹೊಡೆದಿದ್ದು, ಅವಿಶ್ವಾಸ ನಿರ್ಣಯದ ಮೇಲಿನ ಗಂಭೀರ ಚರ್ಚೆ ವೇಳೆ ಸದನವನ್ನು ಸ್ವಾರಸ್ಯಕರವಾಗುವಂತೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಆರೋಪಗಳನ್ನು ಕೇಳಿ ನರ್ವಸ್ ಆಗಿದ್ದಾರೆ. ಹೀಗಾಗಿ ಅವರು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿಲ್ಲ ಎಂದು ರಾಹುಲ್ ಟಾಂಗ್ ನೀಡಿದರು. ಇದಕ್ಕೆ ಪ್ರಧಾನಿ ಮೋದಿ ನಗುತ್ತಲೇ ಉತ್ತರ ನೀಡಿದರು.
ಪ್ರಧಾನಿ ಮೋದಿ ದೇಶದ ಎರಡು ಕೋಟಿ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದರು. ಆದರೆ, ಕೇವಲ 4 ಲಕ್ಷ ಜನರಿಗೆ ಮಾತ್ರ ಉದ್ಯೋಗ ನೀಡಲಾಗಿದೆ. ಅಲ್ಲದೆ, ಜಿಎಸ್ ಟಿಯಿಂದ ದೇಶದ ಆರ್ಥಿಕತೆ ಹಾಳಾಗಿದೆ, ಸಣ್ಣ ಉದ್ಯಮಿಗಳಿಗೆ ಹೊಡೆತ ಬಿದ್ದಿದೆ ಎಂದೂ ಸಹ ಕೇಂದ್ರ ಸರ್ಕಾರದ ವಿರುದ್ಧ ಸಂಸದ ರಾಹುಲ್ ಆರೋಪ ಮಾಡಿದರು.
ತಮ್ಮ ಭಾಷಣದ ಬಳಿಕ ಮೋದಿ ಅವರನ್ನು ಆಲಿಂಗನ ಮಾಡಿದಲ್ಲದೆ ಕಣ್ಣು ಹೊಡೆದಿದ್ದು, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ. ಜತೆಗೆ, ಕಣ್ ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಫೇಮಸ್ ಆದ ರೀತಿ ರಾಹುಲ್ ಗಾಂಧಿ ಕಣ್ಣು ಹೊಡೆದು ಟ್ರೋಲ್ ಗೊಳಗಾಗಿದ್ದಾರೆ.