ಹೌರಾ(ಪಶ್ಚಿಮಬಂಗಾಳ): ಇತ್ತೀಚೆಗಷ್ಟೇ ಪಶ್ಚಿಮಬಂಗಾಳದಲ್ಲಿ ಇಬ್ಬರು ಬಿಜೆಪಿ ನಾಯಕರ ಅನುಮಾನಾಸ್ಪದ ಸಾವಿನ ನಂತರ ಇದೀಗ ತೃಣಮೂಲ ಕಾಂಗ್ರೆಸ್(ಟಿಎಂಸಿ)ಪಕ್ಷದ ನಾಯಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಹೌರ ಜಿಲ್ಲೆಯ ಬಗ್ನಾನ್ ಪ್ರದೇಶದ ಬೂತ್ ಮಟ್ಟದ ಕಾರ್ಯದರ್ಶಿ ಟಿಎಂಸಿ ಪಕ್ಷದ ಮೊಹಮ್ಮದ್ ಮೊಹಿಸಿನ್ ಖಾನ್ ಕಳೆದ ರಾತ್ರಿ ಮನೆಗೆ ಮರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಮೊಹಮ್ಮದ್ ಮೊಹಿಸಿನ್ ಖಾನ್ ಪತ್ನಿ ಟಿಎಂಸಿ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದಾರೆ. ಪ್ರಕರಣ ಸಂಬಂಧ ಕೂಡಲೇ ಹಂತಕರನ್ನು ಬಂಧಿಸಬೇಕು ಎಂದು ಕಳೆದ ರಾತ್ರಿ ಹತೂರಿಯ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು.
ಇನ್ನು ಮೊಹಮ್ಮದ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.