ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಹರಿದು 6 ಮಕ್ಕಳು, ಶಿಕ್ಷಕ ದುರ್ಮರಣ

ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬರುತ್ತಿದ್ದ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಶಿಕ್ಷಕ ಹಾಗೂ 6 ಮಂದಿ ಮಕ್ಕಳು ದುರ್ಮರಣವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕನೌಜ್: ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬರುತ್ತಿದ್ದ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಶಿಕ್ಷಕ ಹಾಗೂ 6 ಮಂದಿ ಮಕ್ಕಳು ದುರ್ಮರಣವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. 
ಲಖನೌ-ಆಗ್ರಾ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಹರಿದ್ವಾರ ಪ್ರವಾಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಸ್ ಹರಿದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. 
ಘಟನೆಯಲ್ಲಿ ಮತ್ತಿಬ್ಬರೂ ಕೂಡ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. 
ಸಂತ ಕಬೀರ ನಗರದಿಂದ ಹರಿದ್ವಾರದ ಕಡೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸ ಬೆಳೆಸಿದ್ದರು. ಈ ವೇಳೆ ಬಸ್ ನಲ್ಲಿ ಡೀಸೆಲ್ ಖಾಲಿಯಾಗಿದ್ದರಿಂದ ಬೇರೆ ಬಸ್ ನಿಂಡ ಡೀಸೆಲ್ ತೆಗೆದುಕೊಳ್ಳಲು ರಸ್ತೆತ ಬದಿಯಲ್ಲಿ ನಿಂತಿದ್ದರು. ಈ ವೇಳೆ ಹೆದ್ದಾರಿ ಮೂಲಕ ಬಂದ ಮತ್ತೊಂದು ಬಸ್, ರಸ್ತೆತ ಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿದೆ.
ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ ರೂ.2 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಳುಗಳ ಕುಟುಂಬಕ್ಕೆ ರೂ.50,000 ಘೋಷಣೆ ಮಾಡಿದ್ದಾರೆ. 
ಇದಲ್ಲದೆ, ಅಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ಪ್ರಕರಣ ಸಂಬಂಧ ಸೂಕ್ತ ರೀತಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ಗಾಯಾಳುಗಳಿಗೆ ಸೂಕ್ತ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಕೊಡಿಸುವಂತೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com