ನವದೆಹಲಿ: ಕೇಂದ್ರ ಸರ್ಕಾರ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಿದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಬಿಜೆಪಿ ಪರ ಮತಯಾಚಿಸುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ವಿಧಾನಸಭೆಯಲ್ಲಿ ಹೇಳಿದ್ದಾರೆ.
ಪೂರ್ಣ ರಾಜ್ಯದ ಸ್ಥಾನಮಾನ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಕೇಜ್ರಿವಾಲ್, ಒಂದು ವೇಳೆ ಕೇಂದ್ರ ಸರ್ಕಾರ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡದಿದ್ದರೆ ಇಲ್ಲಿನ ಜನ ಬಿಜೆಪಿಯನ್ನು ರಾಷ್ಟ್ರ ರಾಜಧಾನಿಯಿಂದ ಹೊರ ಹಾಕುತ್ತಾರೆ ಎಂದು ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಗೂ ಮುನ್ನವೇ ದೆಹಲಿಗೆ ಪೂರ್ಣ ರಾಜ್ಯದ ಸ್ಥಾನಮಾನ ನೀಡಿ. ನಾವು ಬಿಜೆಪಿ ಪರವಾಗಿ ಮತ ಕೇಳುತ್ತೇವೆ. ದೆಹಲಿಯ ಪ್ರತಿ ನಾಗರಿಕನೂ ನಿಮಗೆ ಮತ ಹಾಕುತ್ತಾರೆ. ಇಲ್ಲದಿದ್ದರೆ ಬಿಜೆಪಿ ದೆಹಲಿ ತೊರೆಯಲಿ ಎನ್ನುತ್ತಾರೆ ಎಂದರು.
ದೆಹಲಿ ವಿಧಾನಸಭೆಯಲ್ಲಿ ಸಂಪೂರ್ಣ ಬಹುಮತ ಹೊಂದಿರುವ ಎಎಪಿ, ಪ್ರತಿಪಕ್ಷಗಳಿಲ್ಲದೆ ಪೂರ್ಣ ರಾಜ್ಯದ ನಿರ್ಣಯವನ್ನು ಅಂಗೀಕರಿಸಿದೆ.
ಇದೇ ವೇಳೆ ದೆಹಲಿ ಜನತೆ ತಮ್ಮ ಹಕ್ಕು, ಭವಿಷ್ಯ ಮತ್ತು ಅಭಿವೃದ್ಧಿಗಾಗಿ ಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡುವಂತೆ ಕರೆ ನೀಡಿದ್ದಾರೆ.