ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸಲು ವಿಪಕ್ಷ ನಾಯಕರೆಲ್ಲರೂ ಒಟ್ಟಾಗುತ್ತಿದ್ದು ಇಂದಿನ ನೀತಿ ಆಯೋಗದ ನಾಲ್ಕನೇ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ತೃತೀಯ ರಂಗ ಸ್ಥಾಪಿಸುವ ತವಕದಲ್ಲಿರುವ ಬಿಜೆಪಿಯೇತ್ತರ ಸಿಎಂಗಳು ಮುಖಾಮುಖಿಯಾದರು.
ದೆಹಲಿಯಲ್ಲಿ ನಡೆಯುತ್ತಿರುವ ನೀತಿ ಆಯೋಗದ ಸಭೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ಎನ್ ಚಂದ್ರಬಾಬು ನಾಯ್ಡು, ಕರ್ನಾಟಕ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಕ್ರಮಗಳು. ಕೇಂದ್ರ ಸರ್ಕಾರದ ಯೋಜನೆಗಳಾದ ಆಯುಷ್ಮಾನ್ ಭಾರತ, ಇಂದ್ರಧನುಷ್, ರಾಷ್ಟ್ರೀಯ ಪೋಷಕಾಂಶ ಯೋಜನೆಗಳ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರಗಳ ಜತೆ ಚರ್ಚಿಸಲಾಗುತ್ತಿದೆ.
ಈ ವೇಳೆ ಮಮತಾ ಬ್ಯಾನರ್ಜಿ ಅವರು ರಾಜ್ಯಗಳ ವ್ಯವಹಾರಗಳಲ್ಲಿ ಕೇಂದ್ರದ ಹಸ್ತಕ್ಷೇಪದ ಕುರಿತಂತೆ ಪ್ರಶ್ನಿಸಿದ್ದಾರೆ. ಇನ್ನು ಚಂದ್ರಬಾಬು ನಾಯ್ಡು ಅವರು ಆಂಧ್ರಗೆ ವಿಶೇಷ ಸ್ಥಾನಮಾನ ನಿರಾಕರಿಸುವ ಬಗ್ಗೆ ಜನರನ್ನು ದಾರಿತಪ್ಪಿಸುವ ಕೆಲಸ ನಡೆಸುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಂದ್ರಬಾಬು ನಾಯ್ಡು ಅವರ ವಿಶೇಷ ಸ್ಥಾನಮಾನ ನೀಡುವ ಮನವಿಯನ್ನು ಬೆಂಬಲಿಸಿದ್ದಾರೆ.