ಜನಶಕ್ತಿಯ ಬದಲಾಗಿ ಧನಶಕ್ತಿ ವಿಜೃಂಭಣೆ ಒಪ್ಪಲಾಗದು: ಶತೃಘ್ನ ಸಿನ್ಹಾ

ತಮ್ಮದೇ ಪಕ್ಷದ ವಿರುದ್ಧ ಟೀಕೆ ಮಾಡಿ ಸದಾ ಸುದ್ದಿಗೆ ಗ್ರಾಸವಾಗುವ ನಟ- ಸಂಸದ ಶತೃಘ್ನ ಸಿನ್ಹಾ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ ಕರ್ನಾಟಕ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಬಿಜೆಪಿ ಪಕ್ಷಕ್ಕೆ ತಿವಿದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಪಾಟ್ನಾ: ತಮ್ಮದೇ ಪಕ್ಷದ ವಿರುದ್ಧ ಟೀಕೆ ಮಾಡಿ ಸದಾ ಸುದ್ದಿಗೆ ಗ್ರಾಸವಾಗುವ ನಟ- ಸಂಸದ ಶತೃಘ್ನ ಸಿನ್ಹಾ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿ ಕರ್ನಾಟಕ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮದೇ ಬಿಜೆಪಿ ಪಕ್ಷಕ್ಕೆ ತಿವಿದಿದ್ದಾರೆ.
ಕರ್ನಾಟಕದಲ್ಲಿ ಅಲ್ಪ ಮತದ ಹೊರತಾಗಿಯೂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿರುವ ಬಿಜೆಪಿ ಕ್ರಮವನ್ನು ಕಟುವಾಗಿ ಖಂಡಿಸಿರುವ ಶತೃಘ್ನ ಸಿನ್ಹಾ ಅವರು, ಸರಣಿ ಟ್ವೀಟ್ ಗಳ ಮೂಲಕ ತಮ್ಮದೇ ಪಕ್ಷದ ಕಾಲೆಳೆಯು ಪ್ರಯತ್ನ ಮಾಡಿದ್ದಾರೆ. ಅಗತ್ಯ ಸಂಖ್ಯಾಬಲವಿಲ್ಲದಿದ್ದರೂ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದನ್ನು ಬಿಜೆಪಿ ಪಕ್ಷದ ಬಂಡಾಯ ನಾಯಕ ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದು, ಜನಶಕ್ತಿಯ ಬದಲಾಗಿ ಧನಶಕ್ತಿ ವಿಜೃಂಭಿಸಿರುವುದನ್ನು ಒಪ್ಪಲಾಗದು ಎಂದು ಟ್ವೀಟ್ ಮಾಡಿದ್ದಾರೆ.
ಅಂತೆಯೇ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮಾಡಿಕೊಂಡಿರುವ ಚುನಾವಣೋತ್ತರ ಮೈತ್ರಿಗೆ ಬೆಂಬಲ ಸೂಚಿಸಿರುವ ಸಿನ್ಹಾ, ನೂತನ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಮಾರ್ಮಿಕವಾಗಿ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಂಬಿಕೆ ಇಲ್ಲದವರು ರಾಜಕೀಯವನ್ನು ಹಾಳುಮಾಡುತ್ತಾರೆ' ಎಂದು ಟೀಕಿಸಿದ್ದಾರೆ.
ಅಂತೆಯೇ ಗೋವಾ, ಮೇಘಾಲಯ ಹಾಗೂ ಮಣಿಪುರದಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ, ಇತರ ಪಕ್ಷಗಳ ಜೊತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದನ್ನೂ ಸಿನ್ಹಾ ಅವರು ಪ್ರಶ್ನಿಸಿದ್ದಾರೆ. 'ಜನರಿಗೆ ಎಲ್ಲ ಸಮಯದಲ್ಲಿಯೂ, ಎಲ್ಲ ಕಡೆಗಳಲ್ಲಿಯೂ ಮೋಸ ಮಾಡಲಾಗದು. ಇದು ನಾಚಿಕೆಗೇಡಿನ ರಾಜಕೀಯ. ಸಾಕ್ಷಿಪ್ರಜ್ಞೆ, ಪಕ್ವತೆ ಮೂಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
'ಪೀಟರ್‌ಗೆ ಸರಿ ಎಂದ ಮೇಲೆ ಪೌಲ್‌ಗೂ ಅದೇ ಸರಿ ಅಲ್ಲವೇ? ಮೇಘಾಲಯ, ಮಣಿಪುರ, ಗೋವಾದಲ್ಲಿ ಮಾಡಿದ್ದು ಸರಿ ಎಂದಾದರೆ ಕರ್ನಾಟಕದಲ್ಲೂ ಅದೇ ಅನ್ವಯವಾಗಬೇಕಲ್ಲವೇ. ದೇವರು ಕರ್ನಾಟಕ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದಾನೆ. ಜೈ ಹಿಂದ್' ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com