ತಮಿಳುನಾಡು: ತೂತುಕುಡಿಯಲ್ಲಿ ಸ್ಟರ್ಲೈಟ್ ಪ್ರತಿಭಟನಾಕಾರರ ಮೇಲೆ ಗೋಲಿಬಾರ್; 10 ಸಾವು, 50 ಜನಕ್ಕೆ ಗಾಯ

ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಮಿಶ್ರಣ ಘಟಕ ಸ್ಟೆರ್ಲೈಟ್ ಕಂಪನಿ ಸ್ಥಗಿತಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ಕಾರಣವಾಗಿದ್ದು, ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ 10 ಮಂದಿ ಸಾವನ್ನಪ್ಪಿದ್ದು, 50 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪೊಲೀಸರ ಲಾಠಿ ಪ್ರಹಾರ ಚಿತ್ರ
ಪೊಲೀಸರ ಲಾಠಿ ಪ್ರಹಾರ ಚಿತ್ರ
Updated on

ತೂತುಕುಡಿ:  ತಮಿಳುನಾಡಿನ ತೂತುಕುಡಿಯಲ್ಲಿ ತಾಮ್ರ ಮಿಶ್ರಣ ಘಟಕ ಸ್ಟೆರ್ಲೈಟ್ ಕಂಪನಿ  ಕಾರ್ಯಾಚರಣೆ ನಿಲ್ಲಿಸುವಂತೆ  ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ಶತದಿನಕ್ಕೆ ಕಾಲಿಡುತ್ತಿದ್ದಂತೆ ಹಿಂಸಾರೂಪಕ್ಕೆ ಕಾರಣವಾಯಿತು. ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್ ನಿಂದಾಗಿ  10 ಮಂದಿ  ಸಾವನ್ನಪ್ಪಿದ್ದು,  50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಉದ್ರಿಕ್ತ ಪ್ರತಿಭಟನಾಕಾರರು, ಜಿಲ್ಲಾಡಳಿತ ಕಚೇರಿ ಹಾಗೂ ಸ್ಟರ್ಲೈಟ್   ನೌಕರರ ವಸತಿ ಗೃಹಗಳಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ.  ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಮಹಿಳೆಯರು ಸೇರಿದಂತೆ ಸುಮಾರು 8 ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಮಧ್ಯಾಹ್ನ 12-50ರ ಸುಮಾರಿಗೆ ಈ ಹಿಂಸಾಚಾರ ಭುಗಿಲೆದಿದ್ದು,  ಕಾನೂನು ವಿಭಾಗದ ಎಡಿಜಿಪಿ  ಹೆಚ್ಚುವರಿ ಬೆಟಲಿಯನ್ ನೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸಪಡುವಂತಾಯಿತು.

ವಿಷಯುಕ್ತ ಅನಿಲ ಹೊರಸೂಸುವಿಕೆಯಿಂದ ನಾನಾ ಬಗೆಯ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವ ತಾಮ್ರ ಮಿಶ್ರಿತ ಘಟಕ ಸ್ಟೆರ್ಲೈಟ್ ಕಂಪನಿ ಮುಚ್ಚುವಂತೆ ಆಗ್ರಹಿಸಿ ನೂರಾರು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಇಡೀ ತೂತುಕುಡಿ ಪಟ್ಟಣ ಸ್ತಬ್ದಗೊಂಡಿತ್ತು.

ಕಲಂ 144 ರ ಅನ್ವಯ ಜಿಲ್ಲಾಧಿಕಾರಿ ಎನ್. ವೆಂಕಟೇಶ್  ನಿಷೇಧಾಜ್ಞೆ ಜಾರಿಗೊಳಿಸಿದ್ದರು.  ಹಳೆ ಬಸ್ ನಿಲ್ದಾಣದ ಬಳಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ಆದರೆ. ಮದಾತೂರು,  ಸೆಂಟ್ ಲೇಡಿ ಸ್ಟೋಸ್ ಚರ್ಚ್ ಮತ್ತಿತರ ಕಡೆಗಳಲ್ಲಿ ಸಾರ್ವಜನಿಕರು ಸೇರಿ  ಸ್ಟೆರ್ಲೈಟ್ ಕಂಪನಿ ಮುಚ್ಚುವಂತೆ ಒತ್ತಾಯಿಸಿದರು. 

ಮುಂಜಾಗ್ರತಾ ಕ್ರಮವಾಗಿ ಸುಮಾರು 4 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಆದರೆ, ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ಮುರಿದು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.  ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಆದಾಗ್ಯೂ, ಜನರನ್ನು ನಿಯಂತ್ರಿಸುವುದು ಕಷ್ಟವಾದಾಗ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಹಿಂಸಾಚಾರದ ವೇಳೆ  ಎರಡು ಪೊಲೀಸ್ ಜೀಪ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, 10ಕ್ಕೂ ಹೆಚ್ಚು ಪೊಲೀಸ್ ವಾಹನಗಳಿಗೆ ಹಾನಿ ಮಾಡಲಾಗಿದೆ. ಮಹಿಳೆಯರು ಸೇರಿದಂತೆ ಹಲವು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉದ್ರಿಕ್ತ 20 ಸಾವಿರ ಜನರು ಸ್ಟರ್ಲೈಟ್  ಕಡೆ ತೆರಳಿ ಜಿಲ್ಲಾಧಿಕಾರಿ ಕಚೇರಿ ಒಳಗಡೆ ನಿಲ್ಲಿಸಿದ್ದ ವಾಹನಗಳು ಹಾಗೂ ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೇ, ಜಿಲ್ಲಾಧಿಕಾರಿ ಕಚೇರಿಗೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಪೊಲೀಸರು ಗುಂಡಿನ ದಾಳಿ ನಡೆಸಬೇಕಾದ ಪರಿಸ್ಥಿತಿ ಉದ್ಬವವಾಯಿತು ಎಂದು ಮುಖ್ಯಮಂತ್ರಿ ಇ. ಪಳನಿಸ್ವಾಮಿ ಹೇಳಿದ್ದಾರೆ.
 
ಮತ್ತೊಂದೆಡೆ ಈ ಘಟನೆಯನ್ನು ಮಕ್ಕಳ್ ನಿಧಿ ಮೈಮ್ ಪಕ್ಷದ ಅಧ್ಯಕ್ಷ ಕಮಲ್ ಹಸನ್ ಖಂಡಿಸಿದ್ದು, ಇದನ್ನು ರಾಜ್ಯಸರ್ಕಾರ ಲಘುವಾಗಿ ಪರಿಗಣಿಸಿದೆ ಎಂದು  ಆರೋಪಿಸಿದ್ದಾರೆ.

  
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com