

ಜೈಪುರ: ರಾಜಸ್ತಾನ ವಿಧಾನಸಭೆ ಚುನಾವಣೆ ವಿಷಯ ಸಂಬಂಧ ಮುಖ್ಯಮಂತ್ರಿ ವಸುಂಧರ ರಾಜೆ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನಡುವೆ ಎಲ್ಲವೂ ಸರಿ ಹೋಗುತ್ತಿಲ್ಲ ಎಂಬ ಊಪಾಪೋಹಗಳಿಗೆ ಇದೀಗ ಇಂಬು ಸಿಕ್ಕಿದೆ. ಕಳೆದ ಅಕ್ಟೋಬರ್ 31ರಂದು ನಡೆದ ಸಭೆಯಲ್ಲಿ ಇದು ಸ್ಪಷ್ಟವಾಗಿ ಬಹಿರಂಗವಾಗಿದ್ದು, ಪಕ್ಷದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಸ್ತಾಪಿಸಿ ವಸುಂಧರಾ ರಾಜೆ ನೀಡಿದ್ದ ಪಟ್ಟಿಯನ್ನು ಅಮಿತ್ ಶಾ ತಿರಸ್ಕರಿಸಿದ್ದಾರೆ.
ರಾಜ್ಯ ಚುನಾವಣೆಯ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವದೇಕರ್ ಮತ್ತು ಬಿಜೆಪಿ ಕೋರ್ ಕಮಿಟಿಯ ಇನ್ನೂ ಅನೇಕ ಸದಸ್ಯರು ಕಳೆದ 31ರಂದು ನಡೆದ ಸಭೆಯಲ್ಲಿ ಹಾಜರಿದ್ದರು. ಅಭ್ಯರ್ಥಿಗಳ ಹಿನ್ನಲೆ ಆಧಾರದ ಮೇಲೆ ಟಿಕೆಟ್ ಹಂಚಿಕೆ ಮಾಡುವಂತೆ ಅಮಿತ್ ಶಾ ಹೇಳಿದ್ದು ಪ್ರತಿ ಕ್ಷೇತ್ರಕ್ಕೆ ಮೂವರು ಸಂಭ್ಯಾವ್ಯ ಅಭ್ಯರ್ಥಿಗಳಂತೆ ಹೊಸ ಪಟ್ಟಿ ತಯಾರಿಸುವಂತೆ ಕೋರ್ ಕಮಿಟಿಗೆ ಸೂಚಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿಯಲ್ಲಿ ಇರುವ ಸದಸ್ಯರು ವಸುಂಧರ ರಾಜೆ ವಿರೋಧಿ ಬಣದವರು. ಅದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪಕ್ಷದ ರಾಜ್ಯ ಉಪಾಧ್ಯಕ್ಷ ಸತೀಶ್ ಪೂಣಿಯಾ, ಕೇಂದ್ರ ಸಚಿವ ಅರ್ಜುನ್ ಮೇಘ್ ವಾಲ್, ರಾಜ್ಯ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಓಂ ಪ್ರಕಾಶ್ ಮಾಥೂರ್ ಇದ್ದಾರೆ. 200 ಸದಸ್ಯ ಸ್ಥಾನ ಬಲದ ರಾಜಸ್ತಾನ ವಿಧಾನಸಭೆಗೆ ರಾಜ್ಯ ಮಟ್ಟದ ಚುನಾವಣಾ ಕೋರ್ ಕಮಿಟಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸುದೀರ್ಘ ಮಾತುಕತೆ ನಂತರ ತಯಾರಿಸಿತು. 70 ಸ್ಥಾನಗಳಿಗೆ ತಲಾ ಒಬ್ಬರು ಅಭ್ಯರ್ಥಿಗಳು, 50 ಸ್ಥಾನಗಳಿಗೆ ಇಬ್ಬರು ಮತ್ತು ಉಳಿದ ಕ್ಷೇತ್ರಗಳಿಗೆ ಮೂರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರು ಕೇಳಿಬಂದಿತ್ತು.
ಆದರೆ ಕಳೆದ ಶುಕ್ರವಾರ ನೀಡಿದ ಎರಡನೇ ಪಟ್ಟಿಯನ್ನು ಕೂಡ ಅಮಿತ್ ಶಾ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. 50 ಕ್ಷೇತ್ರಗಳಿಗೆ ತಲಾ ಒಬ್ಬರು ಅಭ್ಯರ್ಥಿಗಳು, ಉಳಿದ 150 ಸ್ಥಾನಗಳಿಗೆ ಎರಡು ಅಥವಾ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಸೂಚಿಸಿ ಸಂಭಾವ್ಯರ ಪಟ್ಟಿಯನ್ನು ನೀಡುವಂತೆ ಅಮಿತ್ ಶಾ ಅವರು ರಾಜ್ಯ ಘಟಕಕ್ಕೆ ಹೇಳಿರುವುದಾಗಿ ದೆಹಲಿಯ ಬಿಜೆಪಿ ಕಾರ್ಯಕಾರಿಣಿ ಮೂಲಗಳು ತಿಳಿಸಿವೆ.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮುಂದಿನ ವಾರ ಸಭೆ ಕರೆದು ರಾಜಸ್ತಾನ ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಚುನಾವಣೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿ ಉಳಿದಿದ್ದು ಈಗಿರುವ 90ಕ್ಕೂ ಹೆಚ್ಚು ಶಾಸಕರು ತಮಗೆ ಟಿಕೆಟ್ ಸಿಗುವುದಿಲ್ಲವೇನೋ ಎಂಬ ಆತಂಕದಲ್ಲಿದ್ದಾರೆ.
ಇನ್ನೊಂದೆಡೆ ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಯ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ರಾಜ್ಯ ಮುಖ್ಯಸ್ಥ ಸಚಿನ್ ಪೈಲಟ್ ಆಡಳಿತಾರೂಢ ಬಿಜೆಪಿಯನ್ನು ಟೀಕಿಸಿದ್ದು, ತನ್ನ ಶಾಸಕರ ಮೇಲೆ ಬಿಜೆಪಿ ಕೇಂದ್ರ ನಾಯಕರಿಗೆ ನಂಬಿಕೆ ಇಲ್ಲದಿದ್ದರೆ ಯಾವ ಆಧಾರದ ಮೇಲೆ ಜನರ ಬಳಿ ಹೋಗಿ ಮತ ಕೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಬಿಜೆಪಿ ಮುಖಂಡರು, ಸರ್ಕಾರದ ವೈಫಲ್ಯವನ್ನು ಶಾಸಕರ ಮೇಲೆ ಎತ್ತಿಕಟ್ಟಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿದ್ದಾರೆ ಎಂದು ಸಚಿನ್ ಪೈಲಟ್ ಟೀಕಿಸಿದ್ದಾರೆ.