ನವದೆಹಲಿ: ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದಲ್ಲಿ ಕರ್ತಾರ್ ಪುರ ಕಾರಿಡಾರ್ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಖಾಲಿಸ್ತಾನ ಪರ ಹೋರಾಟಗಾರ ಗೋಪಾಲ್ ಸಿಂಗ್ ಚಾವ್ಲಾ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಇದೀಗ ಭಾರೀ ಟೀಕೆಗೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಿಧು ಅವರು, ನಾನು ಪಾಕಿಸ್ತಾನಕ್ಕೆ ತೆರಳಿದ್ದ ವೇಳೆ ಸಾಕಷ್ಟು ಪ್ರೀತಿ ತೋರಿಸಲಾಯಿತು. ಪ್ರತಿ ದಿನ ಸಾವಿರಾರು ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಅದರಲ್ಲಿ ಚಾವ್ಲಾ ಯಾರು ಚೀಮಾ ಯಾರು ಅಂತ ಗೊತ್ತಿಲ್ಲ ಎಂದಿದ್ದಾರೆ.
ಚಾವ್ಲಾ ಜೊತೆಗಿನ ಸಿಧು ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ಪಂಜಾಬ್ ಪ್ರತಿಪಕ್ಷ ನಾಯಕರು ಸಚಿವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗೋಪಾಲ್ ಸಿಂಗ್ ಚಾವ್ಲಾ ಅವರು ಸಿಧು ಜೊತೆಗಿನ ಫೋಟೋವನ್ನು ತಮ್ಮ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕ್ವಮಾರ್ ಜಾವೇದ್ ಬಾಜ್ವಾ ಕೂಡ ಈ ಫೋಟೋದಲ್ಲಿ ಇರುವುದನ್ನು ಕಾಣಬಹುದು.