ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಎರಡು ದಿನಗಳ ಹಿಂದೆ ಪಾಕಿಸ್ತಾನ ನಡೆಸಿದ್ದ ಗುಂಡಿನ ದಾಳಿಗೆ ಮೂವರು ಯೋಧರು ಬಲಿಯಾಗಿದ್ದು, ಈ ಹಿನ್ನಲೆಯಲ್ಲಿ ಭಾರತ ತೀವ್ರವಾಗಿ ಪ್ರತಿಭಟಿಸಿದ್ದು ಪಾಕಿಸ್ತಾನ ರಾಯಭಾರಿ ಹಿರಿಯ ಅಧಿಕಾರಿಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ...
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಎರಡು ದಿನಗಳ ಹಿಂದೆ ಪಾಕಿಸ್ತಾನ ನಡೆಸಿದ್ದ ಗುಂಡಿನ ದಾಳಿಗೆ ಮೂವರು ಯೋಧರು ಬಲಿಯಾಗಿದ್ದು, ಈ ಹಿನ್ನಲೆಯಲ್ಲಿ ಭಾರತ ತೀವ್ರವಾಗಿ ಪ್ರತಿಭಟಿಸಿದ್ದು ಪಾಕಿಸ್ತಾನ ರಾಯಭಾರಿ ಹಿರಿಯ ಅಧಿಕಾರಿಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ಮೂವರು ಯೋಧರು ಹುತಾತ್ಮರಾಗಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ, ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದೆ, ಅಲ್ಲದೆ, ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.
ಯೋಧರ ಮೇಲೆ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಭಯೋತ್ಪಾದಕರು ಭಾರತದ ಗಡಿ ನುಸುಳಲು ಯತ್ನ ನಡೆಸಿದ್ದು, ಈ ವೇಳೆ ಭಾರತೀಯ ಸೇನೆ ಉಗ್ರರನ್ನು ಹತ್ಯೆ ಮಾಡಿದೆ. ತನ್ನದೇ ಪ್ರಜೆಗಳಾಗಿರುವ ಉಗ್ರರ ಮೃತದೇಹಗಳನ್ನು ಪಾಕಿಸ್ತಾನ ವಶಕ್ಕೆ ಪಡೆದುಕೊಳ್ಳಬೇಕೆಂದು ತಿಳಿಸಿದೆ.
ಹಲವು ಬಾರಿ ಶಾಂತಿಗೆ ಕರೆ ನೀಡಿದ್ದರೂ, 2003ರ ಭಾರತ-ಪಾಕ್ ನಡುವಿನ ಕದನ ವಿರಾಮ ಒಪ್ಪಂದವನ್ನು ಪಾಕಿಸ್ತಾನ ಪದೇ ಪದೇ ಉಲ್ಲಂಘನೆ ಮಾಡುತ್ತಲೇ ಇದೆ. 2018ರಲ್ಲಿ ಈವರೆಗೂ ಗಡಿ ನಿಯಂತ್ರಣ ರೇಖೆ ಹಾಗೂ ಅಂತರಾಷ್ಟ್ರೀಯ ಗಡಿ ಬಳಿ ಪಾಕಿಸ್ತಾನ 1,591 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.
ದ್ವಿಪಕ್ಷೀಯ ಒಪ್ಪಂದಗಳಿಗೆ ಪಾಕಿಸ್ತಾನ ಬದ್ಧವಾಗಿರಬೇಕು. ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಯಾವುದೇ ರೀತಿಯಲ್ಲಿಯಲ್ಲೂ ಭಾರತದ ವಿರುದ್ಧ ಭಯೋತ್ಪಾದನೆಗೆ ಬಳಕೆ ಮಾಡಬಾರದು ಎಂದು ಇದೇ ವೇಳೆ ಎಚ್ಚರಿಸಿದೆ.