

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಸಮಸ್ಯೆ ಗಂಭೀರವಾಗಿದ್ದು, 15 ವರ್ಷ ಹಳೆಯದಾದ ಪೆಟ್ರೋಲ್ ಹಾಗೂ 10 ವರ್ಷ ಹಳೆಯದಾದ ಡೀಸೆಲ್ ವಾಹನಗಳನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ.
ಇಂತಹ ವಾಹಗಳು ಸಂಚರಿಸುವುದು ಕಂಡುಬಂದರೆ ಅವುಗಳನ್ನು ವಶಪಡಿಸಿಕೊಳ್ಳುವುದಾಗಿ ಘೋಷಣೆ ಮಾಡಿ ಎಂದು ಸಾರಿಗೆ ಇಲಾಖೆಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಎನ್ ಸಿಆರ್ ಪ್ರದೇಶದಲ್ಲಿ ಮಾಲಿನ್ಯ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, 15 ವರ್ಷ ಹಳೆಯದಾದ ಪೆಟ್ರೋಲ್ ಹಾಗೂ 10 ವರ್ಷ ಹಳೆಯದಾದ ಡೀಸೆಲ್ ವಾಹನಗಳ ಪಟ್ಟಿಯನ್ನು ಸಾರಿಗೆ ಇಲಾಖೆ ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಅಂತರ್ಜಾಲದಲ್ಲಿ ಪ್ರಕಟಿಸುವಂತೆ ನಿರ್ದೇಶನ ನೀಡಿದೆ.
ಈ ಸಂಬಂಧ ಪತ್ರಿಕೆಗಳನ್ನು ಜಾಹಿರಾತು ಪ್ರಕಟಿಸುವಂತೆ ನ್ಯಾಯಾಧೀಶರಾದ ಮದನ್ ಬಿ ಲೊಕುರ್ , ಎಸ್ . ಅಬ್ದುಲ್ ನಜೀರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೂಚಿಸಿದೆ.
ಮಾಲಿನ್ಯ ಸಂಬಂಧ ಸಾರ್ವಜನಿಕರು ದೂರು ದಾಖಲಿಸಲು ಅನುಕೂಲವಾಗುವಂತೆ ಕೂಡಲೇ ಸೋಷಿಯಲ್ ಮೀಡಿಯಾ ಖಾತೆ ತೆರೆಯುವಂತೆ ಕೇಂದ್ರೀಯ ವಾಯು ಮಾಲಿನ್ಯ ಮಂಡಳಿಗೆ ಆದೇಶಿಸಿರುವ ಸುಪ್ರೀಂ ಪೀಠ, ಇದರಿಂದ ಸಂಬಂಧಿತ ಸಂಸ್ಥೆಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದೆ.
ಕ್ಷಿಪ್ರ ಕಾರ್ಯ ಯೋಜನೆಯಡಿಯಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಕ್ರಮ ಕೈಗೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಮಾಲಿನ್ಯ ನಿಯಂತ್ರಣ ತಡೆಗಾಗಿ ತುರ್ತು ನಿರ್ದೇಶನ ನೀಡುವಂತೆ ವಕೀಲ ಅಪರಂಜಿತ ಸಿಂಗ್ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.