ರಫೇಲ್ ಒಪ್ಪಂದ ವಿಷಯ ಕೇವಲ ಆರಂಭವಷ್ಟೇ: ಪ್ರಧಾನಿ ಮೋದಿಗೆ ಕಠಿಣ ಸಂದೇಶ ರವಾನಿಸಿದ ರಾಹುಲ್
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿಯವರು ಮುಂದಿನ ದಿನಗಳಲ್ಲಿ ಸರ್ಕಾರದ ಹಲವು ತಪ್ಪುಗಳನ್ನು...
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಆಧ್ಯಕ್ಷ ರಾಹುಲ್ ಗಾಂಧಿಯವರು ಮುಂದಿನ ದಿನಗಳಲ್ಲಿ ಸರ್ಕಾರದ ಹಲವು ತಪ್ಪುಗಳನ್ನು ಬಹಿರಂಗಪಡಿಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಸ್ವಕ್ಷೇತ್ರ ಅಮೇಥಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದು, ಮುಂದಿನ 3 ತಿಂಗಳುಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಹಲವು ತಪ್ಪುಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ಭ್ರಷ್ಟಾಚಾರವನ್ನು ತೊಲಗಿಸುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ವ್ಯಕ್ತಿಯೊಬ್ಬರು ಅನಿಲ್ ಅಂಬಾನಿಯವರಿಗೇ ರೂ.30,000 ಕೋಟಿ ನೀಡಿದ್ದಾರೆ. ಇದು ಕೇವಲ ಆರಂಭವಷ್ಟೇ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತಷ್ಟು ವೈಫಲ್ಯಗಳನ್ನು ಬಹಿರಂಗಪಡಿಸುತ್ತೇವೆಂದು ತಿಳಿಸಿದ್ದಾರೆ.
ರಫೇಲ್ ಒಪ್ಪಂದ, ವಿಜಯ್ ಮಲ್ಯ, ಲಲಿತ್ ಮೋದಿ, ನೋಟು ನಿಷೇಧ, ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್'ಟಿ) ಈ ಎಲ್ಲಾ ಪ್ರಕರಣಗಳಲ್ಲೂ ಮೋದಿ ಸರ್ಕಾರದ ತಪ್ಪುಗಳಾಗಿವೆ. ಈ ಎಲ್ಲಾ ಪ್ರಕರಣಗಳು ಒಂದರ ಹಿಂದೆ ಒಂದರಂತೆ ಮೋದಿಯವರು ಚೌಕಿದಾರನಲ್ಲ, ಒಬ್ಬ ಕಳ್ಳನೆಂದು ತೋರ್ಪಡಿಸುತ್ತಿದೆ ಎಂದಿದ್ದಾರೆ.